ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬೆಳಗ್ಗೆ 6 ರಿಂದ ಭರ್ಜರಿ ಪ್ರದರ್ಶನ ಕೂಡಾ ಕಾಣುತ್ತಿದೆ. ಆದರೆ ದರ್ಶನ್ ಅಭಿಮಾನಿಗಳ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡಿರುವ ಥಿಯೇಟರ್ ಮಾಲೀಕರು ಪೇಕ್ಷಕರಿಂದ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.
ದೊಡ್ಡಬಳ್ಳಾಪುರ ನಗರದ ರಾಜ್ಕಮಲ್ ಥಿಯೇಟರ್ನಲ್ಲಿ 'ಯಜಮಾನ' ಸಿನಿಮಾ ಬಿಡುಗಡೆಯಾಗಿದ್ದು, ಬೆಳಗ್ಗೆ 6 ರಿಂದ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಮುಂದೆ ಪಟಾಕಿ ಹೊಡೆದು ದರ್ಶನ್ ಕಟೌಟ್ಗಳಿಗೆ ಹಾಲಿನ ಅಭಿಷೇಕ ಮಾಡಿ ದರ್ಶನ್ ಅಭಿಮಾನಿಗಳು ಸಂಭ್ರಮ ಪಟ್ಟರೆ, ಥಿಯೇಟರ್ ಮಾಲೀಕರು ಮಾತ್ರ ಪೇಕ್ಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾಗಳಿಗೆ ಸರ್ಕಾರದಿಂದ ಶೇ. 100 ರಷ್ಟು ತೆರಿಗೆ ವಿನಾಯಿತಿ ಇದ್ದು, ಬಾಲ್ಕನಿ ಪ್ರದಶನಕ್ಕೆ 80 ರೂಪಾಯಿ ಇದ್ದರೆ, ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆ 60 ರೂಪಾಯಿ ಮಾತ್ರ. ಆದರೆ ರಾಜ್ಕಮಲ್ ಥಿಯೇಟರ್ ಮಾಲೀಕ ಪೇಕ್ಷಕರಿಂದ ಹಗಲು ದರೋಡೆ ಮಾಡುತ್ತಿದ್ದು, 60 ಮತ್ತು 80 ರೂಪಾಯಿ ಟಿಕೆಟ್ ಮೇಲೆ 100 ಮತ್ತು 120 ಬೆಲೆಯನ್ನು ಸೀಲ್ ಹೊಡೆದು ಮಾರುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಇಷ್ಟಾದರೂ ಕೂಡಾ ಥಿಯೇಟರ್ ಮಾಲೀಕರು ಜನರಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿಲ್ಲ. ಥಿಯೇಟರ್ ಮುಂದೆಯೇ ರಾಜಾರೋಷವಾಗಿ ಟಿಕೆಟ್ ಬೆಲೆಯ ಬೋರ್ಡ್ ಹಾಕಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಪರಭಾಷೆ ಚಿತ್ರಗಳಿಗೆ ಶೇ. 100 ರಷ್ಟು ತೆರಿಗೆ ಇದ್ದು ದುಪ್ಪಟ್ಟು ಹಣ ಕೊಟ್ಟು ನೋಡುವುದು ಅನಿವಾರ್ಯ. ಆದರೆ ಕನ್ನಡ ಚಿತ್ರರಂಗದ ಬೆಳವಣಿಗೆಗೆಂದು ಶೇ. 100ರಷ್ಟು ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದರೆ ಥಿಯೇಟರ್ ಮಾಲೀಕರು ಮತ್ತು ಹಂಚಿಕೆದಾರರು ಒಂದಾಗಿ ಜನರಿಂದ ಹಣ ವಸೂಲಿಗೆ ಇಳಿದು ಪೇಕ್ಷಕ ಮತ್ತು ಸರ್ಕಾರಕ್ಕೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ದರ್ಶನ್ ಅಭಿಮಾನಿಗಳ ಆರೋಪ.
ಇನ್ನು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಥಿಯೇಟರ್ ಮಾಲೀಕರು ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕೂಡಾ ನೀಡಿಲ್ಲ. ಶೌಚಾಲಯ ಸರಿ ಇಲ್ಲ, ಥಿಯೇಟರ್ ಆವರಣದಲ್ಲಿ ಕಸದ ರಾಶಿ ಹಾಗೇ ಬಿದ್ದಿರುತ್ತದೆ. ಯಜಮಾನ ಸಿನಿಮಾ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ದರ್ಶನ್, ಥಿಯೇಟರ್ ಮಾಲೀಕರ ಹಗಲು ದರೋಡೆಯ ಬಗ್ಗೆ ಮಾತನಾಡಬೇಕು ಎಂಬುದು ದಚ್ಚು ಅಭಿಮಾನಿಗಳ ಒತ್ತಾಯ.