ಕನ್ನಡ ಚಿತ್ರರಂಗದಲ್ಲಿ, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞಾನರು ಕೂಡ ಕೊರೊನಾ ಹೆಮ್ಮಾರಿಗೆ ಉಸಿರು ಚೆಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಸಂಯುಕ್ತ-2, ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿದ ನಿರ್ಮಾಪಕ ಡಿ.ಎಸ್. ಮಂಜುನಾಥ್ ಕೊರೊನಾದಿಂದ ಮೃತಪಟ್ಟಿದ್ದರು. ಇದೀಗ ೦% ಲವ್ ಚಿತ್ರದಲ್ಲಿ ಹೀರೋ ಆಗಿ ನಟಿಸಲು ಮುಂದಾಗಿದ್ದ ನಟ ಹಾಗೂ ನಿರ್ದೇಶಕ ಅಭಿರಾಮ್ ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ.
34 ವರ್ಷದ ಅಭಿರಾಮ್ ಕಳೆದೊಂದು ವಾರದಿಂದ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು, ಅನಾರೋಗ್ಯದ ಲಕ್ಷಣಗಳಿದ್ದರೂ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ. ಕನಿಷ್ಟ ಕೋವಿಡ್ ಪರೀಕ್ಷೆಯನ್ನಾದರೂ ಮಾಡಿಸಿಕೊಳ್ಳದೆ ಉಸಿರಾಟದ ತೊಂದರೆ ಶುರುವಾಗುವ ತನಕ ಮನೆಯಲ್ಲೇ ಇದ್ದರು. ಇದೇ ಕಾರಣವೋ ಏನೋ ಇಂದು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಕನಸಿಟ್ಟು ರೂಪಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ಡೈರೆಕ್ಟರ್ ಇಬ್ಬರನ್ನೂ ಕೊರೊನಾ ನುಂಗಿಕೊಂಡಿದೆ.