ಬೆಂಗಳೂರು: ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್, ಸಾವಿರಾರು ಜನರನ್ನು ಬಲಿ ಪಡೆಯುವ ಮೂಲಕ ಸಾವಿನ ಕೇಕೆ ಹಾಕುತ್ತಿದೆ. ಈ ಕೊರೊನಾವನ್ನು ತಡೆಗಟ್ಟಲು ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಮಹಾಮಾರಿ ವಿರುದ್ಧ ಹೋರಾಡಲು ಕೆಲವು ದಿನಗಳ ಹಿಂದೆ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಇಡೀ ಸೌಥ್ ಸ್ಟಾರ್ಸ್ ಸೇರಿದಂತೆ ಹಲವು ನಟರು ಕೊರೊನಾ ಬಗ್ಗೆ ಭಯ ಪಡಬೇಡಿ ಎಂದು ಹಾಡಿನ ಮೂಲಕ ಜಾಗೃತಿ ಮೂಡಿಸಿದ್ರು.
ಈಗ ಕನ್ನಡ ಚಿತ್ರರಂಗದಲ್ಲೂ ಈ ಕೊರೊನಾ ವಿರುದ್ಧ ನಾವೆಲ್ಲರೂ ಹೋರಾಟ ಮಾಡೋಣ ಅಂತಿದ್ದಾರೆ ಸ್ಯಾಂಡಲ್ವುಡ್ ಕಲಾವಿದರು. ಹೌದು, ಈ ಕೊರೊನಾ ವಿರುದ್ಧ ನಾವೆಲ್ಲರೂ ಒಟ್ಟಾಗಿ ಇರೋಣವೆಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಶ್ರೀಮುರಳಿ, ಧನಂಜಯ್, ಚಿರಂಜೀವಿ ಸರ್ಜಾ, ಮೇಘನಾ ರಾಜ್, ದಿಗಂತ್, ಐಂದ್ರಿತಾ ರೇ, ಪ್ರಜ್ವಲ್ ದೇವರಾಜ್, ವಿಜಯ್ ರಾಘವೇಂದ್ರ, ನಿಧಿ ಸುಬ್ಬಯ್ಯ, ಶಾನ್ವಿ ಶ್ರೀವಾತ್ಸವ್, ಶ್ರದ್ಧಾ ಶ್ರೀನಾಥ್, ನಿಶ್ವಿಕಾ ನಾಯ್ಡು ಹಾಗೂ ರಕ್ಷಿತಾ ಸೇರಿದಂತೆ ಅನೇಕ ತಾರೆಯರು ನಾವೆಲ್ಲರೂ ಒಟ್ಟಾಗಿ ಇರೋಣ ಎಂಬ ಸಂದೇಶವನ್ನ ರವಾನಿಸಿದ್ದಾರೆ.
ಈ ಹಾಡಿಗೆ ಯುವ ನಿರ್ದೇಶಕ ಪನ್ನಗ ಭರಣ ನಿರ್ದೇಶನ ಮಾಡಿದ್ದರೆ, ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ಗಾಯಕ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್ ಈ ಹಾಡನ್ನು ಹಾಡಿದ್ದಾರೆ. ರಾಜ್ಯ ಸರ್ಕಾರ ಕನ್ನಡ ಚಿತ್ರರಂಗದ ಸ್ಟಾರ್ಗಳನ್ನು ಬಳಸಿಕೊಂಡು ಈ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.