ಲಾಕ್ಡೌನ್ ಸಮಯದಲ್ಲಿ ಕಿರುತೆರೆ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ ಕೇಳಿ ಬಂದಿದೆ. ಲಾಕ್ಡೌನ್ ನಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿರುವ ಜನರು ಟೈಂ ಪಾಸ್ಗಾಗಿ ಟಿವಿಯ ಮೊರೆ ಹೋಗುತ್ತಿದ್ದರು. ಮನೆ ಕೆಲಸಗಳೆಲ್ಲ ಮುಗಿದ ಬಳಿಕ ಆರಾಮವಾಗಿ ಟಿವಿ ನೋಡುತ್ತಾ ಕಾಲ ಕಳೆಯುತ್ತಿರುವ ಜನರಿಗೆ ಈ ಶಾಕಿಂಗ್ ನ್ಯೂಸ್ ಬಂದಿದೆ.
ವಿವಿಧ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ಬಂದ್ ಆಗಲಿದೆ.
ಜುಲೈ 24, 2016 ರಂದು ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಆರಂಭಿಸಿರುವ ಕಲರ್ಸ್ ಸೂಪರ್ ವಾಹಿನಿ ಚಾನೆಲ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸರ್ಪ ಸಂಬಂಧ, ನಾ ನಿನ್ನ ಬಿಡಲಾರೆ, ನಾಗಕನ್ನಿಕೆ, ಮನೆಯೇ ಮಂತ್ರಾಲಯ, ರಾಜಾ ರಾಣಿ, ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ, ಅಪರಂಜಿ, ಯುಗಳ ಗೀತೆಯಂತಹ ಧಾರಾವಾಹಿಗಳನ್ನು ಪ್ರಸಾರ ಮಾಡಿರುವ ಕಲರ್ಸ್ ಸೂಪರ್ ಚಾನೆಲ್ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು.
ಅಷ್ಟೇ ಅಲ್ಲದೇ ಮಾಂಗಲ್ಯಂ ತಂತು ನಾನೇನಾ, ಭೂಮಿ ತಾಯಾಣೆ, ಸಿಲ್ಲಿ ಲಲ್ಲಿ, ಪಾಪಾ ಪಾಂಡು, ಮಗಳು ಜಾನಕಿ ಧಾರಾವಾಹಿಗಳು ಹೀಗೆ ವಿವಿಧ ನಮೂನೆಯ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನ ಸೆಳೆಯುತ್ತಿದ್ದ ಕಲರ್ಸ್ ಸೂಪರ್ ಫಿಕ್ಷನ್ ಮಾತ್ರವಲ್ಲದೇ ನಾನ್ ಫಿಕ್ಷನ್ಗೂ ಫೇಮಸ್.
ಕನ್ನಡ ಕೋಗಿಲೆ ಸೀಸನ್ 1,2, ಕನ್ನಡ ಕೋಗಿಲೆ ಸೂಪರ್ ಸೀಸನ್, ಮಜಾ ಭಾರತ, ಸೂಪರ್ ಟಾಕ್ ಟೈಮ್ ಮುಂತಾದಂತಹ ಕಾರ್ಯಕ್ರಮಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿದ್ದ ಕಲರ್ಸ್ ಸೂಪರ್ ಇದೀಗ ಪ್ರಸಾರ ನಿಲ್ಲಿಸುತ್ತಿರುವುದು ಬೇಸರ ತಂದಿದೆ.
ಆದರೆ, ಕೆಲವು ದಿನಗಳು ಕಳೆದ ಬಳಿಕ ಹೊಸ ರೂಪದೊಂದಿಗೆ ಕಲರ್ಸ್ ಸೂಪರ್ ವಾಹಿನಿ ಮರಳಿ ಬರುತ್ತದೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಇದರೊಂದಿಗೆ ಒಂದಷ್ಟು ಹೊಸ ಹೊಸ ಕಾರ್ಯಕ್ರಮ, ಧಾರಾವಾಹಿಗಳು ಬರಲಿವೆ ಎಂಬ ಸುದ್ದಿ ಸತ್ಯವಾ ಸುಳ್ಳಾ? ಎಂದು ಕಾದು ನೋಡಬೇಕಾಗಿದೆ.