ಕಿರುತೆರೆ, ಹಿರಿತೆರೆಯಲ್ಲಿ 30 ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಇದೀಗ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ.
ಗೆಳೆಯ ಶ್ರೀಸಾಯಿಕೃಷ್ಣ ಅವರ ಜೊತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೊಸ ಸ್ಟುಡಿಯೊ ಆರಂಭಿಸಿದ್ದಾರೆ. ಈ ಹೊಸ ಸಿನಿಮಾ ಸ್ಟುಡಿಯೋವನ್ನು ಇತ್ತೀಚೆಗಷ್ಟೇ ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡರು ಹಾಗು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಉದ್ಘಾಟನೆ ಮಾಡಿದರು.
ತಮ್ಮ ಹೊಸ ಸ್ಟುಡಿಯೋದ ವಿಶೇಷತೆಗಳ ಕುರಿತಂತೆ ಮಾತನಾಡಿದ ಶ್ರೀಸಾಯಿಕೃಷ್ಣ, ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡ ಸ್ಟುಡಿಯೋ ಇದಾಗಿದೆ ಎಂದರು. ಬುಕ್ಕಾಪಟ್ಟಣ ವಾಸು ಮಾತನಾಡಿ, ಮೊದಲು ಜಾಹೀರಾತಿಗೆಂದೇ ಈ ಸಂಸ್ಥೆ ನಿರ್ಮಿಸಿದ್ದು. ಇದೇ ಬ್ಯಾನರ್‌ನಿಂದ ಈಗ ಹೊಸ ಚಿತ್ರಗಳನ್ನು ಶುರು ಮಾಡುತ್ತಿದ್ದೇವೆ ಎಂದರು. ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ, ವಾಸು 28 ವರ್ಷದ ಹಿಂದೆ ನನ್ನಜೊತೆ ಕೆಲಸ ಮಾಡಿದ್ದರು. ಪಕ್ಕದ ಆಂಧ್ರದಲ್ಲಿ ಆದಂಥ ಬೆಳವಣಿಗೆ ಇಲ್ಲಿ ಕಾಣುತ್ತಿಲ್ಲ. ಅಲ್ಲಿ ಪ್ರತಿಯೊಬ್ಬ ಸ್ಟಾರ್‌ಗಳು ಸ್ಟುಡಿಯೋ ಮಾಡಿ ಇಂಡಸ್ಟ್ರಿಗೆ ಕೊಡುಗೆ ಕೊಟ್ಟಿದ್ದಾರೆ. ಕನ್ನಡ ಫಿಲಂ ಇಂಡಸ್ಟ್ರಿ ಈಗ ತುಂಬಾ ಬೆಳೆದಿದೆ. ಅದಕ್ಕೆ ವಾಸು ಅವರೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಪ್ರೊ. ದೊಡ್ಡರಂಗೇಗೌಡರು ಮಾತನಾಡಿ, ನನ್ನ ಮತ್ತು ವಾಸು ಸಂಬಂಧ ತುಂಬಾ ಹಳೆಯದು. ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್‌ಗೆ ನನ್ನಿಂದ 11 ಹಾಡುಗಳನ್ನು ಬರೆಸಿದ್ದರು. ಇದು ಸೆಂಚುರಿ ಫಿಲಂ ಇನ್ ಸ್ಟಿಟ್ಯೂಟ್‌ನ ಇನ್ನೊಂದು ಶಾಖೆ ಎನ್ನಬಹುದು ಎಂದರು.