‘ಎಳೆಯರು ನಾವು ಗೆಳೆಯರು’ ಮಕ್ಕಳ ಸಿನಿಮಾ ಮೂಲಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವ ನಿರ್ದೇಶಕ ವಿಕ್ರಮ್ ಸೂರಿ ಅವರ ಮತ್ತೊಂದು ಸಿನಿಮಾ 'ಚೌಕಾಬಾರ'ದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಸೂರಿ ಅವರ ಈ ಚಿತ್ರಕ್ಕೆ ಪತ್ನಿ ನಮಿತಾ ರಾವ್ ಅವರೇ ಬಂಡವಾಳ ಹೂಡಿರುವುದು ವಿಶೇಷ.
ಇದು ಮಣಿ ಆರ್.ರಾವ್ ರಚನೆಯ ‘ಭಾವನ’ ಕಾದಂಬರಿ ಆಧಾರಿತ ಚಿತ್ರವಾಗಿದೆ. ನಟಿ ರೂಪ ಪ್ರಭಾಕರ್ ಅವರು ಚಿತ್ರಕ್ಕೆ ಸಂಭಾಷಣೆ ನೀಡಿದ್ದಾರೆ. ಹದಿ ಹರೆಯದ ಮನಸ್ಸಿನ ತಾಕಲಾಟ, ಪ್ರಸ್ತುತ ಸಮಾಜದಲ್ಲಿರುವ ಪ್ರೀತಿ, ತ್ಯಾಗ, ಕಾಮ ಹಾಗೂ ಸಾಮಾಜಿಕ ಪ್ರಜ್ಞೆಯ ಕುರಿತು ವಿಭಿನ್ನವಾಗಿ ತೋರಿಸಲಿದ್ದಾರೆ ನಿರ್ದೇಶಕರು.
ನಾಯಕನಾಗಿ ಭರತ್, ನಾಯಕಿಯರಾಗಿ ನಟಿಯರಾಗಿ ಭಾವನ, ಭೂಷಣ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಹಿರಿಯ ಸಾಹಿತಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್ ಅವರು ಸೊಗಸಾಗಿ ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಹರೀಶ್ ಭಟ್ ಮತ್ತು ವಿಕ್ರಮ್ ಸೂರಿ ಅವರ ಸಾಹಿತ್ಯವೂ ಇದೆ. ಅಶ್ವಿನ್ ಪಿ.ಕುಮಾರ್ ಸಂಗೀತವಿದ್ದು, ಶಶಿ ಅವರ ಸಂಕಲನ, ರವಿ ರಾಜ್ ಅವರ ಛಾಯಾಗ್ರಹಣವಿದೆ.
ಭಾವನಾ ಪಾತ್ರದ ಜೊತೆಗೆ ಕಾವ್ಯ ರಮೇಶ್, ಪ್ರಭಂಜನ್, ವಿಹಾನ್, ಸುಜಯ್ ಹೆಗ್ಡೆ, ಸಂಜಯ್ ಸೂರಿ, ಶಶಿಧರ್ ಕೋಟೆ, ಕೀರ್ತಿ ಭಾನು, ಕಿರಣ್ ವಟಿ, ಮಧು ಹೆಗ್ಡೆ, ಪ್ರಥಮ ಪ್ರಸಾದ್, ಸೀತಾ ಕೋಟೆ, ದಮಯಂತಿ ನಾಗರಾಜ್, ಸುಮಾರಾವ್, ಆ್ಯಡಂ ಪಾಶಾ ಅಭಿನಯಿಸಿದ್ದಾರೆ.