ಎಸ್ಎಸ್ ಸ್ಟುಡಿಯೋ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಡಿಟಿಎಸ್ (ಡೇರ್ ಟು ಸ್ಲೀಪ್) ಚಿತ್ರಕ್ಕೆ ನಾಯಕನಾಗಿ ಆ ದಿನಗಳು ಚಿತ್ರದ ಖ್ಯಾತಿಯ ಚೇತನ್ ಮತ್ತೊಂದು ಸಿನಿಮಾ ಶುರುವಾಗಿದೆ.
ಈಗಾಗಲೇ '100 CRORES' ಸಿನಿಮಾ ನಿರ್ಮಾಣ ಮಾಡಿದ್ದ ತಂಡವೇ ಡಿಟಿಎಸ್ ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಡಿಟಿಎಸ್ ಸಿನಿಮಾ ನಿರ್ಮಾಣವಾಗುತ್ತಿದೆ. ತೆಲುಗಿನ ಸಾಯಿ ಕಾರ್ತಿಕ್ ಮತ್ತು ಶ್ರೀಕಾಂತ್ ದೀಪಾಲ ಡಿಟಿಎಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಭಿರಾಮ್ ಫಿಲಂ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚೇತನ್ ಜತೆಗೆ ತೆಲುಗಿನ ಖ್ಯಾತ ಹಾಸ್ಯ ನಟ ಸುನೀಲ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಚಿತ್ರೀಕರಣವೂ ಶುರುವಾಗಿದೆ.
ಪಕ್ಕಾ ಆ್ಯಕ್ಷನ್ ಹಿನ್ನೆಲೆಯಲ್ಲೇ ಸಾಗುವ ಈ ಚಿತ್ರದಲ್ಲಿ ಸುನೀಲ್ ಖಡಕ್ ಪೊಲೀಸ್ ಅಧಿಕಾರಿಯಾದರೆ, ಚೇತನ್ ಅಷ್ಟೇ ಪ್ರಧಾನವಾದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ನಾಲ್ಕು ಸಾಹಸ ದೃಶ್ಯಗಳಿರುವ ಈ ಸಿನಿಮಾದ ಬಹುತೇಕ ಶೂಟಿಂಗ್ ದುಬೈ, ಥಾಯ್ಲೆಂಡ್ ಸೇರಿ ಹಲವೆಡೆ ನಡೆಯಲಿದೆ. ಬೆಂಗಳೂರು ಮತ್ತು ಹೈದರಬಾದ್ನಲ್ಲಿಯೂ ನಡೆಯಲಿದೆ. ಈ ಚಿತ್ರಕ್ಕೆ ಬಾಲಿವುಡ್ ನಟಿಯರನ್ನು ಚಿತ್ರತಂಡ ಕರೆತಂದಿದೆ. ಡೋನಲ್ ಮತ್ತು ನತಾಶಾ ನಾಯಕಿಯರಾಗಿ ನಟಿಸುತ್ತಿದ್ದು, ಈಗಾಗಲೇ ಇವರೂ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಇದೇ 24ರಂದು ಅಧಿಕೃತವಾಗಿ ಚಿತ್ರ ಸೆಟ್ಟೇರಲಿದ್ದು, ಸಿನಿಮಾ ಘೋಷಣೆ ಮಾಡಲಿದ್ದಾರೆ ನಿರ್ಮಾಪಕರು.
ಇನ್ನುಳಿದಂತೆ ಕಬೀರ್ ಸಿಂಗ್, ಕೃಷ್ಣ ಮುರಳಿ, ಚರಣ್, ಶಕಲಕಾ ಶಂಕರ್, ಚಿತ್ರಂ ಶ್ರೀನು, ಗೆಟಪ್ ಸೀನು, ರವಿ ವರ್ಮಾ, ರಕೇಂದು ಮೌಳಿ ತಾರಾಗಣದಲ್ಲಿದ್ದಾರೆ. ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.