ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮ ಮೊಮ್ಮಗ ಎಂದು ಹೇಳಿಕೊಂಡು ಓಡಾಡುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಿರ್ದೇಶಕ ಹಾಗೂ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಕೆಂಡಾಮಂಡಲವಾಗಿದ್ದಾರೆ.
ರಾಜಕಾರಣಿ ಹಾಗೂ ಸಿನಿ ರಂಗದ ನಟ-ನಟಿಯರ ವಿರುದ್ಧ ಸೂಕ್ತ ಸಾಕ್ಷ್ಯಧಾರವಿಲ್ಲದೆ ಪ್ರಶಾಂತ್ ಸಂಬರಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಸುಳ್ಳು ದಾಖಲಾತಿ ಬಿಡುಗಡೆ ಮಾಡುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ದೂರು ನೀಡಿದ್ದಾರೆ.
ನಂತರ ಈ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ ಮೂರು ವರ್ಷಗಳಿಂದಲೂ ರಾಜಕಾರಣಿ, ಸಿನಿಮಾ ನಟ-ನಟಿಯರು ಸೇರಿ ಇನ್ನಿತರ ಪ್ರಭಾವಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲದಿದ್ದರೂ ಅವಹೇಳನಕಾರಿ ಮಾತನಾಡುತ್ತಿದ್ದಾರೆ.ಅಲ್ಲದೆ, ಇಲ್ಲಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಮಾಧ್ಯಮಗಳ ಮುಖಾಂತರ ಪ್ರಚಾರ ಗಿಟ್ಟಿಸಿಕೊಂಡು ಪರೋಕ್ಷವಾಗಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.
ಪ್ರಶಾಂತ್ ಸಂಬರಗಿ ಬಳಿ ನಿಜವಾದ ದಾಖಲಾತಿ ಇದ್ದರೆ ಅದನ್ನು ಪೊಲೀಸರಿಗೆ ನೀಡಲಿ. ಅದು ಬಿಟ್ಟು ಸುಖಾಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ.ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡು ಅವರ ಮನೆ ಮೇಲೆ ದಾಳಿ ನಡೆಸಿ ದಾಖಲಾತಿ ಇರುವ ಶೋಧ ನಡೆಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದೇನೆ. ಆಯುಕ್ತರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಂಬರಗಿ ವಿರುದ್ಧ ನೀಡಿದ ದೂರಿನಲ್ಲಿ ಏನಿದೆ ?
ಯಾವುದೇ ಆಧಾರವಿಲ್ಲದೆ ನಟ- ನಟಿಯರನ್ನು ಟಾರ್ಗೆಟ್ ಮಾಡುವ ಸಂಬರಗಿ 3 ವರ್ಷಗಳ ಹಿಂದೆ ಶೃತಿ ಹರಿಹರನ್ಗೆ ಕ್ರೈಸ್ತ ಮಿಷನರಿಯಿಂದ ಕೊಟ್ಯಂತರ ಹಣ ಸಂದಾಯವಾಗಿದೆ. ಅದೇ ಹಣ ಬಳಸಿಕೊಂಡು ದೇಶದ್ರೋಹಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿ ಪೊಲೀಸ್ ಠಾಣೆಗೆ ದೂರು ನೀಡದೆ ನುಣುಚಿಕೊಂಡಿದ್ದರು. ಈ ಸಂಬಂಧ ನಟಿ ಶೃತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಅವರು ತೆರಿಗೆ ಹಣದಲ್ಲಿ ಶ್ರೀಲಂಕಾದ ಕ್ಯಾಸಿನೋಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ದಾಖಲಾತಿ ನೀಡದೆ ಪರೋಕ್ಷವಾಗಿ ಬ್ಲ್ಯಾಕ್ ಮೇಲ್ ತಂತ್ರ ಪ್ರಯೋಗಿಸಿದ್ದರು. ಸ್ಯಾಂಡಲ್ವುಡ್ನಲ್ಲಿ ಕೆಲ ನಟಿಯರು ಡ್ರಗ್ಸ್ ನಿಂದಲೇ ಹಣ ಸಂಪಾದನೆ ಮಾಡುತ್ತಾರೆ. ಅದರ ಮೂಲ ಗೊತ್ತು ಎಂದು ಹೇಳಿದ್ದರು. ಇದರಿಂದ ಕನ್ನಡ ಸಿನಿಮಾರಂಗದ ಮಾನ ದೇಶ್ಯಾದ್ಯಂತ ಹರಾಜು ಹಾಕಿದ ಹಾಗೆ ಆಗಿದೆ. ಇದುವರೆಗೂ ಮಾಧ್ಯಮಗಳ ಮುಂದೆ ಆರೋಪಿಸಿದ್ದ ಹೇಳಿಕೆಗಳಿಗೆ ಸೂಕ್ತ ದಾಖಲೆಗಳು ಕೊಟ್ಟಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ನಿರೂಪಕಿ ಅನುಶ್ರೀ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಮನೆ ಕಟ್ಟಿದ್ದಾರೆ ಎಂದು ಇತ್ತೀಚೆಗೆ ಆರೋಪಿಸಿದ್ದರು. ಇದರ ಹಿಂದೆ ರಾಜಕೀಯ ಪ್ರಭಾವ ಅಡಗಿದೆ. ಶುಗರ್ ಡ್ಯಾಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿಯೊಬ್ಬರ ಆಡಿಯೊ ಬಿಡುಗಡೆ ತಿಳಿಸಿದ್ದರು. ಆದರೆ ಈ ಬಗ್ಗೆಯೂ ದಾಖಲೆಗಳನ್ನು ಯಾವೊಬ್ಬ ಅಧಿಕಾರಿಗಳಿಗೂ ನೀಡಿಲ್ಲ.
ಅದರ ಕುರಿತಾಗಿಯೂ ದಾಖಲೆಗಳು ನೀಡಿಲ್ಲ. ಈ ಎಲ್ಲಾ ಪ್ರಕರಣ ಗಮನಿಸಿದಾಗ ಬ್ಲಾಕ್ ಮೇಲ್ ದಂಧೆಯಲ್ಲಿ ತೊಡಗಿದ್ದಾರೆ ಅಂತ ಅನುಮಾನ ಮೂಡಿಸಿದೆ. ಸಾಮಾಜಿಕ ಪಿಡುಗು ಹಾಗೂ ಅನೈತಿಕತೆ ವಿಚಾರವನ್ನು ಸ್ವಂತ ಪ್ರಚಾರಕ್ಕೆ ಬಳಸಿಕೊಂಡು, ಬ್ಲ್ಯಾಕ್ ಮೇಲ್ ದಂಧೆಗೆ ಬಳಸಿಕೊಂಡು ಪೊಲೀಸರ ತನಿಖೆ ವೇಳೆಯಲ್ಲಿ ತನಿಖೆ ದಿಕ್ಕು ತಪ್ಪಿಸುವ ಕೆಲಸ ಕಳೆದ ಮೂರು ವರ್ಷಗಳಿಂದ ಮಾಡುತ್ತಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರಿನಲ್ಲಿ ಆಯುಕ್ತರಿಗೆ ಚಂದ್ರಚೂಡ್ ಮನವಿ ಮಾಡಿದ್ದಾರೆ.
ಓದಿ: ಪಡ್ಡೆಹುಲಿಯ ರಾಣ ಸಿನಿಮಾಗೆ ಸಾಥ್ ನೀಡಿದ ರಿಯಲ್ ಸ್ಟಾರ್ ಉಪೇಂದ್ರ