ಬೆಂಗಳೂರು: ಬಿಗ್ಬಾಸ್ ಸ್ಪರ್ಧಿಯಾಗಿದ್ದ ನಟಿ ಚೈತ್ರಾ ಕೋಟೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ಸ್ಟ್ರಕ್ಷನ್ ಉದ್ಯಮಿ ನಾಗಾರ್ಜುನ ಎಂಬವರನ್ನು ವರಿಸಿದ್ದು, ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಇವರ ವಿವಾಹ ನಡೆದಿದೆ.
ಬಿಗ್ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರ್, ಅಲ್ಲಿಂದ ಹೊರ ಬಂದ ಮೇಲೆ ನಾಗಾರ್ಜುನ ಅವರೊಂದಿಗೆ ಗೆಳೆತನವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆ ರೂಪ ಪಡೆದುಕೊಂಡಿದೆ. ಚೈತ್ರಾ ಅವರಿಗೆ ಮೊದಲಿನಿಂದಲೂ ಸರಳವಾಗಿ ಮದುವೆಯಾಗಬೇಕೆಂಬ ಆಶಯವಿತ್ತಂತೆ. ಅದರಂತೆ ಸರಳ ವಿವಾಹವಾಗಿದ್ದು, ನವಜೋಡಿಗೆ ಅಭಿಮಾನಿಗಳು, ಸಿನಿಪ್ರಿಯರು, ಆಪ್ತರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಚೈತ್ರಾಗೆ ಪ್ಯಾರ್ಗೆ ಆಗ್ಬುಟೈತಂತೆ! ಯಾರಪ್ಪಾ ಅದು ಅಂದ್ರಾ?
ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಚೈತ್ರಾ ಕೋಟೂರ್ 'ಸೂಜಿದಾರ' ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಚಿತ್ರದಲ್ಲಿ ಅವರದ್ದು ಪ್ರಮುಖ ಪಾತ್ರವಾಗಿತ್ತು. ಕಳೆದ ವಾರವಷ್ಟೇ ಸಿನಿಮಾವೊಂದರಲ್ಲಿ ಡೆಪ್ಯೂಟಿ ಕಮಿಷನರ್ ಪಾತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದ ಚೈತ್ರಾ, ಶೀಘ್ರದಲ್ಲೇ ಸಿನಿಮಾವೊಂದನ್ನು ನಿರ್ದೇಶಿಸುವ ಉದ್ದೇಶವಿರುವುದಾಗಿ ತಿಳಿಸಿದ್ದರು. ಜತೆಗೆ ಒಂದು ಆಲ್ಬಂ ಹಾಡನ್ನು ಬರೆದು, ನಿರ್ದೇಶನವನ್ನೂ ಅವರೇ ಮಾಡಿದ್ದರು.