ಬೆಂಗಳೂರು : ನಿನ್ನೆ ಬಹುಅಂಗಾಂಗ ವೈಫಲ್ಯದಿಂದ ಮೃತರಾದ ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರವನ್ನು ಇಂದು ಅವರ ಸ್ವಗೃಹಕ್ಕೆ ರವಾನೆ ಮಾಡಲಾಗಿದೆ.
ಕೋವಿಡ್-19 ಭೀತಿಯಿಂದ ನಿನ್ನೆ ರಾತ್ರಿ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯದಂತೆ ಸಚಿವ ಆರ್. ಅಶೋಕ್ ಬುಲೆಟ್ ಪ್ರಕಾಶ್ ಅವರ ಕುಟುಂಬಸ್ಥರಲ್ಲಿ ಮನವಿ ಮಾಡಿ ಎಂ ಎಸ್ ರಾಮಯ್ಯ ಶವಾಗಾರದಲ್ಲಿ ಇರಿಸಿದ್ದರು.
ಆದರೆ, ಇಂದು ಬೆಳಗ್ಗೆ ನಟ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರವನ್ನ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭುವನೇಶ್ವರಿನಗರದಲ್ಲಿರುವ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹತ್ತಿರದ ಸಂಬಂಧಿಕರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಬುಲೆಟ್ ಪ್ರಕಾಶ್ ಮನೆ ಬಳಿ ತುಂಬಾ ಜನ ಸೇರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಬುಲೆಟ್ ಪ್ರಕಾಶ್ ನಿವಾಸಕ್ಕೆ ದುನಿಯಾ ವಿಜಿ ಆಗಮಿಸಿ ಅಂತಿಮ ದರ್ಶನಕ್ಕೆ ಅನುವು ಮಾಡಿ ಕೊಡ್ತಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಂತಿಮ ದರ್ಶನ ಪಡೆಯುವಂತೆ ಪ್ರಕಾಶ್ ಸಂಬಂಧಿಕರಲ್ಲಿ ದುನಿಯಾ ವಿಜಿ ಮನವಿ ಮಾಡ್ತಿದ್ದಾರೆ. ಈಗಾಗಲೇ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಬ್ಬಾಳದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬುಲೆಟ್ ಪ್ರಕಾಶ್ ಮೃತದೇಹವನ್ನು ಮಡಿವಾಳ ಸಂಪ್ರದಾಯದಂತೆ ಮಣ್ಣಲ್ಲಿ ಹೂಳಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.