ಕನ್ನಡ ಚಿತ್ರರಂಗದಲ್ಲಿ ಬಿ.ಆರ್. ಪಂತುಲು ಇತಿಹಾಸ ಸೃಷ್ಟಿಸಿದ ನಿರ್ದೇಶಕ, ನಟ, ನಿರ್ಮಾಪಕ. ಚಿತ್ರರಂಗಕ್ಕೆ ಸಾಕಷ್ಟು ಎವರ್ಗ್ರೀನ್ ಸಿನಿಮಾಗಳನ್ನು ನೀಡಿದವರು ಅವರು. 'ಶ್ರೀ ಕೃಷ್ಣದೇವರಾಯ' ಚಿತ್ರಕ್ಕಾಗಿ ತಮಗೆ ಒಲಿದುಬಂದ ಶ್ರೇಷ್ಠ ನಟ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದವರು ಬಿ.ಆರ್. ಪಂತುಲು.
ಡಾ. ರಾಜ್ಕುಮಾರ್ ಅಭಿನಯದ 'ಶ್ರೀಕೃಷ್ಣದೇವರಾಯ' ಅಂದಿನ ಕಾಲದಲ್ಲಿ ದೊಡ್ಡ ಜಯಭೇರಿ ಬಾರಿಸಿತ್ತು. ಈ ಚಿತ್ರವನ್ನು ಬಿ.ಆರ್. ಪಂತುಲು ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದರು. ಚಿತ್ರದಲ್ಲಿ ಅವರು ಮಹಾಮಂತ್ರಿ ತಿಮ್ಮರಸು ಆಗಿ ನಟಿಸಿದ್ದರು. ಈ ಚಿತ್ರಕ್ಕಾಗಿ ರಾಜ್ಯ ಸರ್ಕಾರ ಬಿ.ಆರ್. ಪಂತುಲು ಅವರಿಗೆ ಶ್ರೇಷ್ಠನಟ ಪ್ರಶಸ್ತಿ ಘೋಷಿಸಿತ್ತು. ಆದರೆ 50 ವರ್ಷಗಳ ಹಿಂದೆ ಇದೇ ತಿಂಗಳ 23 ರಂದು ಬಿ.ಆರ್. ಪಂತುಲು ತಮಗೆ ದೊರೆತ ರಾಜ್ಯಪ್ರಶಸ್ತಿಯನ್ನು ನಿರಾಕರಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಈ ಪ್ರಶಸ್ತಿ ದೊರೆಯಬೇಕಾಗಿರುವುದು ನನಗಲ್ಲ, ಡಾ. ರಾಜ್ಕುಮಾರ್ ಅವರಿಗೆ ಎಂದು ಪತ್ರದಲ್ಲಿ ಬಿ.ಆರ್. ಪಂತುಲು ಉಲ್ಲೇಖಿಸಿದ್ದರು. ಸಾಮಾನ್ಯವಾಗಿ ನಮಗೆ ಪ್ರಶಸ್ತಿ ಬರುತ್ತಿದೆ ಎಂದರೆ ಯಾರೂ ನಿರಾಕರಿಸುವುದಿಲ್ಲ. ಆದರೆ ತಮಗೆ ಒಲಿದು ಬಂದ ರಾಜ್ಯಸರ್ಕಾರ ಪ್ರಶಸ್ತಿಯನ್ನು ಬಿ.ಆರ್. ಪಂತುಲು ಸ್ವೀಕರಿಸಲಿಲ್ಲ. ಬಿ.ಆರ್. ಪಂತುಲು ಎಂದರೆ ಈಗಲೂ ನೆನಪಿಗೆ ಬರುವುದು ಈ ರೀತಿಯ ನಿರ್ಧಾರಗಳಿಗೆ. ಇದು ನಿಜಕ್ಕೂ ಇತರರಿಗೆ ಮಾದರಿ ಎನ್ನಬಹುದು.
1970 ರಲ್ಲಿ ಬಿಡುಗಡೆ ಆಗಿದ್ದ ಶ್ರೀ ಕೃಷ್ಣದೇವರಾಯ ಚಿತ್ರಕ್ಕೆ ನಟಿ ಭಾರತಿ ಹಾಗೂ ಸಂಗೀತ ನಿರ್ದೇಶಕ ಟಿ.ಜಿ. ನಿಜಲಿಂಗಪ್ಪ ಅವರಿಗೂ ರಾಜ್ಯಪ್ರಶಸ್ತಿ ನೀಡಲಾಗಿತ್ತು.