ಕಳೆದ ವರ್ಷ ಬಾಲಿವುಡ್ ತೆರೆಕಂಡು ಸೂಪರ್ಹಿಟ್ ಆಗಿದ್ದ ಸಿನಿಮಾ ಅಂಧಾಧುನ್. ಅಷ್ಟೇನು ನಿರೀಕ್ಷೆ ಇಲ್ಲದೆ ರಿಲೀಸ್ ಆಗಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸರ್ಪ್ರೈಸ್ ಹಿಟ್ ಆಗಿತ್ತು. ಈ ಸಿನಿಮಾ ಹುಟ್ಟಿದ್ದೇ ಕನ್ನಡದ ಓರ್ವ ಯುವ ನಿರ್ದೇಶಕನಿಂದ ಅನ್ನೋದು ಹಲವರಿಗೆ ಗೊತ್ತಿಲ್ಲ.
ಅಷ್ಟಕ್ಕೂ ಆ ನಿರ್ದೇಶಕ ಯಾರು ಅನ್ನೋದನ್ನ ಇಲ್ಲಿ ಹೇಳ್ತೀವಿ. ಆ ಕಥೆ ಹುಟ್ಟಿದ್ದು ಹೇಗೆ..? ಚಂದನವನ ಹಾಗೂ ಬಿಟೌನ್ ಕನೆಕ್ಷನ್ ಹೇಗಾಯ್ತು ಅನ್ನೋದನ್ನ ಸ್ವತಃ ಯುವ ನಿರ್ದೇಶಕರೇ ಹೀಗೆ ಹೇಳಿದ್ದಾರೆ...
"ನನ್ನ ಮೊದಲ ಸಿನಿಮಾ ಯಶಸ್ವಿಯಾದ ಬಳಿಕ ಏನಾದರೂ ಹೊಸದಾಗಿ ಪ್ರಯತ್ನಿಸಬೇಕು ಎನ್ನುವ ಮನಸ್ಸಾಗಿತ್ತು. ಮುಂಬೈಗೆ ಹೋಗಿ ಬಾಲಿವುಡ್ನಲ್ಲಿ ಕೆಲಸ ಮಾಡುವ ಯೋಚನೆ ಮಾಡಿ ತೆರಳಿದೆ."
"ನಾನು ಈ ಮೊದಲು ನಾಗತಿಹಳ್ಳಿ ಚಂದ್ರಶೇಖರ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ದುಡಿದಿದ್ದೆ. ಇದನ್ನೇ ಮುಂಬೈನಲ್ಲಿ ಹೇಳಿದಾಗ ಉತ್ತಮ ಗೌರವ ದೊರೆಯಿತು. ನಿಜಕ್ಕೂ ಇದು ನನಗೆ ಆಶ್ಚರ್ಯ ತರಿಸಿತು. ಮುಂಬೈನಲ್ಲಿ ನಂಗೆ ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ಪರಿಚಯವಾದ್ರು."
" ರಾಘವನ್ ಹೊಸ ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ನಾನು ನನ್ನ ಬಳಿ ಇದ್ದ ಒಂದು ಕಥೆಯನ್ನು ಹೇಳಿದೆ. ಖುಷಿಯಾದ ರಾಘವನ್ ಸಿನಿಮಾ ಮಾಡೋಣ ಎಂದರು. ಆದರೆ ಅದು ಯಾಕೋ ಆ ಸಿನಿಮಾ ಟೇಕಾಫ್ ಆಗಲಿಲ್ಲ. ನಾನು ಕೆಲ ಸಮಯದ ಬಳಿಕ ಮತ್ತೆ ಸ್ಯಾಂಡಲ್ವುಡ್ ಕಡೆಗೆ ಬಂದೆ."
" ನನ್ನ ಎರಡನೇ ಸಿನಿಮಾದ ಕೆಲಸವನ್ನು ಶುರು ಮಾಡಿದೆ. ಆದರೆ ರಾಘವನ್ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. ಮೇಲ್ಗಳಲ್ಲಿ ನಮ್ಮ ಹೆಚ್ಚಿನ ಮಾತುಕತೆ ನಡೆಯುತ್ತಿತ್ತು. ಒಂದು ರಾತ್ರಿ ನಾನು ಫ್ರೆಂಚ್ ಶಾರ್ಟ್ ಫಿಲ್ಮ್(ಲಾಕಾರ್ಡಿಯೌರ್) ಒಂದನ್ನು ನೋಡಿ ಖುಷಿ ಪಟ್ಟು ರಾಘವನ್ ಅವರಿಗೆ ಕಳುಹಿಸಿದೆ."
" ಕೆಲ ಕ್ಷಣದಲ್ಲೇ ರಾಘವನ್ ಕರೆ ಮಾಡಿ ಶಾರ್ಟ್ ಫಿಲ್ಮ್ ತುಂಬಾ ಚೆನ್ನಾಗಿದೆ. ಇದನ್ನೇ ಸ್ಫೂರ್ತಿಯಾಗಿಸಿ ಕಥೆ ಬರೆಯೋಣ ಎಂದರು. ಆಗ ಹುಟ್ಟಿದ್ದೇ ಅಂಧಾಧುನ್. ನಾನು ಈ ಪ್ರಾಜೆಕ್ಟ್ನಲ್ಲಿ ಭಾಗಿಯಾಗಿದ್ದೆ. ಮಧ್ಯಂತರದವರೆಗಿನ ಸ್ಕ್ರಿಪ್ಟ್ ಬರೆದಿದ್ದೆ. ಆ ಬಳಿಕ ನನ್ನ ಎರಡನೇ ಸಿನಿಮಾದಲ್ಲಿ ಬ್ಯುಸಿಯಾದ ಕಾರಣ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗಲಿಲ್ಲ."
ಅಂದ ಹಾಗೆ ಅಂಧಾಧುನ್ ಕಥೆಗೆ ಕಾರಣವಾದ ಸ್ಯಾಂಡಲ್ವುಡ್ ನಿರ್ದೇಶಕ ಹೇಮಂತ್ ಎಂ. ರಾವ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಸದ್ಯ ತೆರೆಗೆ ಬರಲು ಸಿದ್ಧವಾಗಿರುವ ಕವಲುದಾರಿ ಸಿನಿಮಾಗಳ ನಿರ್ದೇಶಕ. ಹೇಮಂತ್, ನಿರ್ದೇಶಕ ಶ್ರೀರಾಮ್ ರಾಘವನ್ ಬಳಿ ಮೊದಲಿಗೆ ಹೇಳಿದ್ದ ಕಥೆ ಸದ್ಯ ನಿರ್ಮಾಣವಾಗಿರುವ ಕವಲುದಾರಿ. ಎಲ್ಲವೂ ಅಂದಕೊಂಡಂತೆ ಆಗಿದ್ದರೆ ಕವಲುದಾರಿ ಹಿಂದಿಯಲ್ಲಿ ತಯಾರಾಬೇಕಿತ್ತು.
ಹೇಮಂತ್ ಎಂ. ರಾವ್ ಈ ಎಲ್ಲಾ ಕುತೂಹಲಕಾರಿ ವಿಚಾರಗಳನ್ನು ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಅಂಧಾಧುನ್ ಕಲೆಕ್ಷನ್ ಮಾತ್ರವಲ್ಲದೆ ಹಲವು ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಸುಮಾರು 30 ಕೋಟಿಯಲ್ಲಿ ನಿರ್ಮಾಣವಾದ ಅಂಧಾಧುನ್ ನೂರು ಕೋಟಿ ಗಳಿಕೆ ಮಾಡಿ ಎಲ್ಲರ ಹುಬ್ಬೇರಿಸಿತ್ತು.