ಚಿತ್ರದುರ್ಗದ ಕಲ್ಲಿನ ಕೋಟೆಯ ಪ್ರತಿಯೊಂದು ಕಲ್ಲುಕೂಡಾ ಒಂದೊಂದು ಐತಿಹಾಸಿಕ ಕಥೆಯನ್ನು ಹೇಳುತ್ತದೆ. ಐತಿಹಾಸಿಕ ರೋಚಕ ಚರಿತ್ರೆ ಹೊಂದಿರುವ ಚಿತ್ರದುರ್ಗದಲ್ಲಿ ಹಲವಾರು ಪಾಳೆಗಾರರು ಅಧಿಪತ್ಯ ನಡೆಸಿ ಹೋಗಿದ್ದಾರೆ. ಅಂತಹ ಪಾಳೇಗಾರರಲ್ಲಿ ಬಿಚ್ಚುಗತ್ತಿಯ ಭರಮಣ್ಣ ನಾಯಕ ಕೂಡಾ ಒಬ್ಬರು.
ಪಾಳೇಗಾರ ಭರಮಣ್ಣನ ಕುರಿತಾಗಿ ತಯಾರಿಸಿರುವ 'ಬಿಚ್ಚುಗತ್ತಿ ಭರಮಣ್ಣ ನಾಯಕ' ಚಿತ್ರ ಚಿತ್ರೀಕರಣ ಮುಗಿಸಿ ರಿಲೀಸ್ಗೆ ರೆಡಿಯಾಗಿದೆ. ಇಂದು ಚಿತ್ರತಂಡ ಸಿನಿಮಾದ ವಿಶೇಷ ಟೀಸರ್ ಒಂದನ್ನು ಲಾಂಚ್ ಮಾಡಿದೆ. ಚಿತ್ರದಲ್ಲಿ ಭರಮಣ್ಣನ ಪಾತ್ರದಲ್ಲಿ ನಟಿಸಿರುವ ರಾಜವರ್ಧನ್ ಹುಲಿ ಜೊತೆ ಕಾದಾಡಿರುವ ರೋಚಕ ಟೀಸರನ್ನು ಚಿತ್ರತಂಡ ಲಾಂಚ್ ಮಾಡಿದೆ. ಇದೇ ಶುಕ್ರವಾರ ಭರಮಣ್ಣ ತೆರೆ ಮೇಲೆ ರಾರಾಜಿಸಲಿದ್ದಾನೆ. ಇನ್ನು ಚಿತ್ರದ ಟೀಸರ್ ಹಾಗೂ ಮೇಕಿಂಗ್ ನೋಡಿದರೆ ಯಾವುದೇ ಪರಭಾಷಾ ಚಿತ್ರಗಳಿಗೇನೂ ಕಡಿಮೆ ಎಲ್ಲ ಎನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ.
ಹರಿ ಸಂತು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟಿಸಿದ್ದು ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಸಿದ್ದಾಂಬೆ ಪಾತ್ರದಲ್ಲಿ ನಟಿಸಿದ್ದು, ಇಡೀ ಚಿತ್ರತಂಡ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಗಳಂತೆ ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಚಿತ್ರ 150 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಡಬ್ಬಿಂಗ್ ರೈಟ್ಸ್ಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರ ಬಿಡುಗಡೆಯಾದ ನಂತರ ಪ್ರತಿಕ್ರಿಯೆ ನೋಡಿಕೊಂಡು ಚಿತ್ರತಂಡವೇ ತೆಲುಗಿಗೆ ಡಬ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಒಟ್ಟಿನಲ್ಲಿ ಕನ್ನಡದಲ್ಲಿ ಈ ಹಿಂದೆ ಬಂದ ಐತಿಹಾಸಿಕ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಈಗ ಮತ್ತೊಂದು ಐತಿಹಾಸಿಕ ಚಿತ್ರ 'ಬಿಚ್ಚುಗತ್ತಿ' ಕೂಡಾ ಬಿಡುಗಡೆಯಾಗುತ್ತಿದ್ದು ಈ ಸಿನಿಮಾ ಜನರ ಮೆಚ್ಚುಗತ್ತಿ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.