ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳ ಪೈಕಿ ವಿಷ್ಣುವರ್ಧನ್-ಸುಹಾಸಿನಿ ಅಭಿನಯದ ಬಂಧನ ಚಿತ್ರವೂ ಒಂದು. ಈ ಸಿನಿಮಾದ ಕೊನೆಯಲ್ಲಿ ಡಾ. ಹರೀಶ್ (ವಿಷ್ಣುವರ್ಧನ್) ಪ್ರಾಣ ಬಿಡುತ್ತಾರೆ. ನಂದಿನಿ (ಸುಹಾಸಿನಿ) ಮಗುವನ್ನು ಎತ್ತಿಕೊಂಡು ಹೊರಟು ಹೋಗುತ್ತಾರೆ. ಆದರೆ ಈಗ ಆ ಮಗು ಏನಾಗಿದೆ ಗೊತ್ತಾ?. ಈ ಬಗ್ಗೆ ತಿಳಿಸಲು ಬಂಧನ ಚಿತ್ರದ ಸೀಕ್ವೆಲ್ ಬರುತ್ತದೆ ಎಂಬ ಸುದ್ದಿ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಈಗ ಆ ಚಿತ್ರ ಬರುವುದಕ್ಕೆ ಕಾಲ ಪಕ್ವವಾಗಿದೆ.
ಮೂಲ ಚಿತ್ರವನ್ನು ನಿರ್ದೇಶಿಸಿದ್ದ ರಾಜೇಂದ್ರ ಸಿಂಗ್ ಬಾಬು, ಈಗ ಅದರ ಮುಂದುವರೆದ ಭಾಗವನ್ನು ನಿರ್ದೇಶಿಸುವುದಕ್ಕೆ ಮುಂದಾಗಿದ್ದು, ಅಕ್ಟೋಬರ್ 22ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಕನ್ನಡಿಗರ ಮನಸ್ಸಿನಲ್ಲಿ ಇಂದೂ ಹಚ್ಚಹಸಿರಾಗಿರುವ ಬಂಧನ ಚಿತ್ರದ ಸೀಕ್ವೆಲ್ ಬರುತ್ತದೆ. ಆ ಚಿತ್ರವು ಉಷಾ ನವರತ್ನರಾಮ್ ಅವರ ಜನಪ್ರಿಯ ಕಾದಂಬರಿಯನ್ನಾಧರಿಸಿದ್ದಾಗಿದೆ. ಇನ್ನು ಈ ಸಿನಿಮಾ ನಂದಿನಿ ಮಗು ಈಗೇನಾಗುತ್ತದೆ ಎಂಬುದರ ಸುತ್ತ ಸುತ್ತಲಿದೆ. ಆ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ ಡಾ. ಹರೀಶ್ ಪಾತ್ರ ಕೊನೆಯಾಗುತ್ತದೆ.
ಇನ್ನು ಸುಹಾಸಿನಿ ಮತ್ತು ಜೈ ಜಗದೀಶ್ ಅವರ ಪಾತ್ರಗಳು ಜೀವಂತವಾಗಿದ್ದು, ಅಲ್ಲಿಂದ ಬಂಧನ 2 ಮುಂದುವರಿಯುತ್ತದೆ. ಇನ್ನು, ಸುಹಾಸಿನಿ ಅವರ ಮಗನ ಪಾತ್ರವನ್ನು ಆದಿತ್ಯ ಮಾಡುತ್ತಿದ್ದಾರೆ ಎಂಬುದು ವಿಶೇಷ.
ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣ ಮಾಡುತ್ತಿದ್ದು, ಈ ಮೂಲಕ ಬಹಳ ವರ್ಷಗಳ ನಂತರ ಚಿತ್ರ ನಿರ್ಮಾಣಕ್ಕೆ ವಾಪಸ್ ಆಗುತ್ತಿದ್ದಾರೆ. ಬಂಧನ 2 ಚಿತ್ರವನ್ನು ಅವರು ತಮ್ಮ ವೀರಾ ಎಂಟರ್ಪ್ರೈಸಸ್ನ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.
ಬಂಧನ 2 ಚಿತ್ರದ ಸ್ಕ್ರಿಪ್ಟಿಂಗ್ ಕೆಲಸ ಈಗಾಗಲೇ ಮುಗಿದಿದೆ. ಇನ್ನು, ಅಕ್ಟೋಬರ್ 22ರಂದು ರಾಜೇಂದ್ರ ಸಿಂಗ್ ಬಾಬು ಅವರ ಹುಟ್ಟುಹಬ್ಬವಿದ್ದು, ಅಂದು ಚಿತ್ರ ಅಧಿಕೃತವಾಗಿ ಸೆಟ್ಟೇರಲಿದೆ. ಚಿತ್ರದಲ್ಲಿ ಆದಿತ್ಯ, ಸುಹಾಸಿನಿ, ಜೈಗದೀಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಅವರ ಜತೆಗೆ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಇದೊಂದು ತ್ರಿಕೋನ ಪ್ರೇಮಕಥೆಯಾಗಿರುತ್ತದೋ ಅಥವಾ ಫ್ಯಾಮಿಲಿ ಡ್ರಾಮಾ ಆಗಿರುತ್ತದೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.