ಕನ್ನಡ ಚಿತ್ರರಂಗವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾರಂಗದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತನ್ನದೇ ಛಾಪು ಮೂಡಿಸಿದ್ದಾರೆ. ಈ ಬಹುಭಾಷಾ ನಟಿಯ ಬಗ್ಗೆ ನಾಡಿಗೆ ತಿಳಿಸಲೆಂದು ಅವರ ಅಳಿಯ, ನಟ ಅನಿರುದ್ದ್ ಸಾಕ್ಷ್ಯಚಿತ್ರ ನಿರ್ಮಾಣ-ನಿರ್ದೇಶನ ಮಾಡಿದ್ದಾರೆ.
ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ 'ಬಾಳೇ ಬಂಗಾರ' ಹೆಸರಿನ ಸಾಕ್ಷ್ಯಚಿತ್ರದ ಸಣ್ಣ ಟೀಸರ್ ಬಿಡುಗಡೆ ಮಾಡಿ ಅಳಿಯ ಅನಿರುದ್ದ್ ಈ ಹಿಂದೆ ವಿಶೇಷ ಉಡುಗೊರೆ ನೀಡಿದ್ದರು. ಸಾಕ್ಷ್ಯಚಿತ್ರದ ಕೆಲಸವೀಗ ಪೂರ್ಣಗೊಂಡಿದ್ದು ನಿನ್ನೆ ಕನ್ನಡ ಚಿತ್ರರಂಗದ ಸ್ನೇಹಿತರೆದುರು ಪ್ರದರ್ಶನ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ ಭಾರತಿ ವಿಷ್ಣುವರ್ಧನ್ ಬದುಕಿನಲ್ಲೂ ಸಾಕಷ್ಟು ಏರಿಳಿತಗಳನ್ನ ಕಂಡವರು. ಬಾಳೇ ಬಂಗಾರ ಸಾಕ್ಷ್ಯಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಬಾಲ್ಯ, ಶಾಲೆಯ ದಿನಗಳು, ಕಾಲೇಜು ಬಳಿಕ ಸಿನಿಮಾ ಹಾಗೂ ವಿಷ್ಣುವರ್ಧನ್ ಜೊತೆಗೆ ಮದುವೆ ಹೀಗೆ ಹಲವಾರು ಕುತೂಹಲಕಾರಿ ವಿಚಾರಗಳನ್ನು ಅನಿರುದ್ದ್ ಹೇಳಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಜೊತೆ ಮಾತನಾಡಿದ ಅನಿರುದ್ಧ್, "ಬಾಳೇ ಬಂಗಾರ ಹೆಸರಿನ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡೋದಕ್ಕೆ ಭಾರತಿ ಅಮ್ಮನೇ ಸ್ಪೂರ್ತಿ. ಡಾ.ವಿಷ್ಣುವರ್ಧನ್ ಹಾಗು ಭಾರತಿ ವಿಷ್ಣುವರ್ಧನ್ ಸೂಪರ್ಸ್ಟಾರ್ಗಳಾಗಿದ್ದರೂ ಸಹ 6 ತಿಂಗಳುಗಳ ಕಾಲ ಊಟವಿಲ್ಲದೆ ಬರೀ ಗಂಜಿ ಕುಡಿದು ಜೀವನ ಸಾಗಿಸಿದ್ದರು. ಈ ಎಲ್ಲಾ ವಿಚಾರಗಳು ಚಿತ್ರದಲ್ಲಿದೆ. ಸಾಕ್ಷ್ಯಚಿತ್ರವನ್ನು ಓಟಿಟಿ ಪ್ಲಾಟ್ ಫಾರಂನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿದೆ" ಎಂದು ಹೇಳಿದರು.
'ಬಾಳೇ ಬಂಗಾರ' ಸಾಕ್ಷ್ಯಚಿತ್ರಕ್ಕೆ ಸ್ವತಃ ಅನಿರುದ್ದ್ ಸಂಶೋಧನೆ, ನಿರೂಪಣೆ, ಹಿನ್ನೆಲೆ ಧ್ವನಿ ಹಾಗು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಭಾರತಿ ವಿಷ್ಣುವರ್ಧನ್ ಅವರ ಬರೋಬ್ಬರಿ 110 ಸಿನಿಮಾಗಳನ್ನ ನೋಡಿ ಈ ಸಾಕ್ಷ್ಯಚಿತ್ರವನ್ನ ನಿರ್ದೇಶನ ಮಾಡಲಾಗಿದೆಯಂತೆ. ಐದು ಗಂಟೆಗಳ ಕಾಲ ಇರುವ ಸಾಕ್ಷ್ಯಚಿತ್ರವನ್ನ ಸಿನಿಮಾದಂತೆ ಎರಡೂವರೆ ಗಂಟೆಗೆ ಇಳಿಸಲಾಗಿದೆ.