ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಸಂಭಾವನೆ ವಿಚಾರದಲ್ಲಿ ನಿರ್ಮಾಪಕರು ಮತ್ತು ಕಲಾವಿದರ ನಡುವೆ ಜಗಳ, ವೈಮನಸ್ಸು ಉಂಟಾಗಿರುವ ಸಾಕಷ್ಟು ಉದಾಹರಣೆಗಳಿವೆ. ನಟ-ನಟಿಯರು ಹಣ ಪಡೆದು ಸಿನಿಮಾ ಚಿತ್ರೀಕರಣಕ್ಕೆ ಬಂದಿಲ್ಲ ಎಂದು ನಿರ್ಮಾಪಕರು ಆರೋಪ ಮಾಡಿದರೆ, ಇನ್ನು ಸಿನಿಮಾಕ್ಕಾಗಿ ಅಡ್ವಾನ್ಸ್ ಹಣ ಪಡೆದುಕೊಂಡು ನಂತರ ಸಿನಿಮಾ ಕ್ಯಾನ್ಸಲ್. ಆದರೆ, ಆ ನಿರ್ಮಾಪಕರಿಗೆ ಹಣ ಹಿಂದಿರುಗಿಸೋಕೆ ಯಾರೂ ಅಷ್ಟು ಸುಲಭವಾಗಿ ಮುಂದೆ ಬರುವುದಿಲ್ಲ ಎಂಬ ಆರೋಪವೂ ಇದೆ. ಆದ್ರೀಗ ಪುನೀತ್ ರಾಜ್ ಕುಮಾರ್ ಕುಟುಂಬದವರು ಈ ಮಾತನ್ನು ಸುಳ್ಳು ಮಾಡಿದ್ದಾರೆ.
ಹೌದು, ಕನ್ನಡ ಚಿತ್ರರಂಗದಲ್ಲೀಗ ಪುನೀತ್ ರಾಜ್‌ಕುಮಾರ್ ಕುಟುಂಬದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳಲ್ಲಿ ಅಭಿಮಾನ ದುಪ್ಪಟ್ಟಾಗಿದೆ. ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಲ್ಲಿರುವ ಪತ್ನಿ ಅಶ್ವಿನಿ ಮಾತ್ರ ನಿರ್ಮಾಪಕರನ್ನು ಮರೆತಿಲ್ಲ.
ಪುನೀತ್ ರಾಜ್ ಕುಮಾರ್ ನಮ್ಮೊಂದಿಗಿದ್ದಾಗ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಜೇಮ್ಸ್ ಬಳಿಕ ಪುನೀತ್ ನಾಲ್ಕೈದು ಸಿನಿಮಾಗಳಿಗೆ ತಮ್ಮ ಕಾಲ್ ಶೀಟ್ ಕೊಟ್ಟಿದ್ದರು. ಇದರಲ್ಲೊಬ್ಬ ನಿರ್ಮಾಪಕರು, ಪುನೀತ್ ಅವರಿಗೆ ಮುಂಗಡ ಹಣವನ್ನೂ ನೀಡಿದ್ದರು.
ಒಂದು ಸಿನಿಮಾಗೆ ಸುಮಾರು 2.5 ಕೋಟಿ ರೂ. ಹಣವನ್ನು ಮುಂಗಡವಾಗಿ ಅಪ್ಪು ಪಡೆದಿದ್ದರು ಅಂತಾ ಸುದ್ದಿಯಾಗಿತ್ತು. ಆ ಹಣವನ್ನು ಈಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆ ನಿರ್ಮಾಪಕರಿಗೆ ವಾಪಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಯಾರು ಆ ನಿರ್ಮಾಪಕ ಅನ್ನೋ ಮಾಹಿತಿ ಇಲ್ಲ.
ಪುನೀತ್ ರಾಜ್ ಕುಮಾರ್ ಆಪ್ತರ ಪ್ರಕಾರ, ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಸೇರಿದಂತೆ ತೆಲುಗು ಸಿನಿಮಾ ನಿರ್ಮಾಪಕರು ಹಾಗೂ ಹಿಂದಿ ಸಿನಿಮಾ ನಿರ್ಮಾಣ ಸಂಸ್ಥೆ ಜೊತೆ ಸಿನಿಮಾ ಮಾಡುವುದಾಗಿ ಮಾತುಕತೆ ಆಗಿತ್ತು ಅಂತಾರೆ. ಆದರೆ, ನಿರ್ದಿಷ್ಟವಾಗಿ ಯಾವ ನಿರ್ಮಾಪಕನಿಗೆ 2.5 ಕೋಟಿ ರೂ. ಹಣವನ್ನು ವಾಪಸ್ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.
ಇನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳುವ ಹಾಗೆ, ಪುನೀತ್ ರಾಜ್ ಕುಮಾರ್ ಸರ್ ಬದುಕಿದ್ದಾಗ ಸಿನಿಮಾ ಮಾಡೋದಕ್ಕೆ ಮಾತುಕತೆ ಆಗಿತ್ತು. ಆ ಸಮಯದಲ್ಲಿ ಲಕ್ಷಕ್ಕೂ ಹೆಚ್ಚು ಮುಂಗಡ ಹಣವನ್ನು ಅಡ್ವಾನ್ಸ್ ಆಗಿ ಕೊಡಲಾಗಿತ್ತು. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನದಲ್ಲಿ ಮಾಡಬೇಕಿತ್ತು.
ಆದರೆ ಈ ಸಿನಿಮಾ ಸೆಟ್ಟೇರುವ ಮುನ್ನ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದರು. ಅಪ್ಪು ನಿಧನದಿಂದ ಯಾವ ನಿರ್ಮಾಪಕರಿಗೂ ತೊಂದರೆ ಆಗಬಾರದೆಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹಣವನ್ನು ವಾಪಸ್ ನೀಡಿದ್ದಾರೆ ಅಂತಾ ಸ್ವತಃ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿದರು.
ಇದನ್ನೂ ಓದಿ: ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ: ಪುನೀತ್- ಬಿಪಿನ್ ರಾವತ್ಗೆ ಪುಷ್ಪ ನಮನ
ಪವರ್‌ಸ್ಟಾರ್ ಪತ್ನಿ ಅಶ್ವಿನಿ ಪುನೀತ್ರಾಜ್ಕುಮಾರ್ ತೆಗೆದುಕೊಂಡ ನಿರ್ಧಾರ ದೊಡ್ಮನೆ ಮೇಲೆ ಮತ್ತಷ್ಟು ಗೌರವ ಹೆಚ್ಚಿಸಿದೆ.