ನಟನೆ, ಕಲಾ ನಿರ್ದೇಶನ, ನಿರೂಪಕ, ಹಾಡುಗಾರ, ಪೇಂಟಿಂಗ್.. ಹೀಗೆ ಸಕಲ ಕಲೆಗಳನ್ನು ಮೈಗೂಡಿಸಿಕೊಂಡಿರುವವರು ನಟ ಅರುಣ್ ಸಾಗರ್. ಇವರು ಮೂಲತಃ ಸಾಗರದವರು. ಪ್ರಸಿದ್ಧ ನಾಟಕಕಾರ ಬಿ.ವಿ.ಕಾರಂತ್ ಅವರ ಅಪ್ಪಟ ಅಭಿಮಾನಿ. ಕಾರಂತ್ ಗರಡಿಯಲ್ಲಿ ಪಳಗಿದ ಇವರು ನಾಟಕಗಳನ್ನು ಮಾಡುತ್ತಾ ಚಿತ್ರರಂಗ ಪ್ರವೇಶ ಮಾಡಿದರು.
ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ಕಲಾ ನಿರ್ದೇಶಕ, ಹಾಡುಗಾರನಾಗಿ ಯಶ ಕಂಡಿರುವ ಅರುಣ್ ಸಾಗರ್ ಈಟಿವಿ ಭಾರತ ಜೊತೆ ತಮ್ಮ ಸಿನಿಮಾಗಳ ಆಯ್ಕೆ, ಡಾ.ರಾಜ್ ಕುಮಾರ್ ಹಾಗು ಪುನೀತ್ ರಾಜ್ಕುಮಾರ್ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು.
ಕನ್ನಡ ಒಳಗೊಂಡಂತೆ ತೆಲುಗು, ತಮಿಳು ಚಿತ್ರರಂಗದಲ್ಲೂ ತನ್ನದೇ ಛಾಪು ಮೂಡಿಸಿರುವ ಇವರು 1997ರಲ್ಲಿ 'ಭೂಮಿಗೀತ' ಎಂಬ ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗುತ್ತಾರೆ. ಕಾರಣಾಂತರಗಳಿಂದ ಈ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸುವ ಬದಲು ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಸಿನಿಮಾ ಲೋಕದಲ್ಲಿ ನಟನೆಂದು ಗುರುತಿಸಿಕೊಂಡ ಮೇಲೆ ಬಹುತೇಕರು ಹೀರೋ ಆಗಿ ಇರೋದಿಕ್ಕೆ ಇಷ್ಟಪಡ್ತಾರೆ. ಆದರೆ, ಅರುಣ್ ಸಾಗರ್ ವಿಚಾರದಲ್ಲಿ ಈ ಮಾತು ಸುಳ್ಳಾಗಿದೆ. ಅರುಣ್ ಸಾಗರ್ ಹೀರೋ ಅನ್ನುವುದಕ್ಕಿಂತ ನಾನು ಕಲಾವಿದ, ಈ ಕಾರಣಕ್ಕೆ ನಾನು ಆಕ್ಟಿಂಗ್, ಕಲಾ ನಿರ್ದೇಶನ, ಹಾಡುಗಾರಿಕೆ.. ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡೋಕೆ ನಂಗಿಷ್ಟ ಅಂತಾರೆ.
ನಾನು ರಂಗಭೂಮಿಯಲ್ಲಿ ನಾಟಕಗಳನ್ನು ಮಾಡಬೇಕಾದ್ರೆ ಬರೀ ನಟನೆ ಮಾತ್ರ ಮಾಡುತ್ತಿರಲಿಲ್ಲ, ಅಲ್ಲಿ ಸೆಟ್ಟುಗಳನ್ನು ಹಾಕುತ್ತಿದ್ದೆ, ಕೆಲವರಿಗೆ ಮೇಕಪ್ ಮಾಡುತ್ತಿದ್ದೆ, ಕಾಸ್ಟೂಮ್ಸ್ಗಳನ್ನು ಕೂಡ ರೆಡಿ ಮಾಡುತ್ತಿದ್ದೆ. ಹೀಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡೋಕೆ ನನಗೆ ಬಹಳ ಇಷ್ಟ ಅಂತಾರೆ.
ಇನ್ನು, ಅಗ್ನಿ ಶ್ರೀಧರ್ ಕಥೆ ಬರೆದಿರುವ ಕ್ರೀಂ ಸಿನಿಮಾಕ್ಕೆ ನಾನು ಕಲಾ ನಿರ್ದೇಶನ ಮಾಡಲು ಹೋಗಿದ್ದೆ. ಆದರೆ ನನಗೆ ಈ ಸಿನಿಮಾದಲ್ಲಿ ವಿಶೇಷ ಪಾತ್ರ ಕೊಟ್ಟರು. ನಾನು ಪ್ರಕೃತಿಯಲ್ಲಿರೋ ಎಲಿಮೆಂಟ್ಸ್ ತರ ಇರಬೇಕೆಂದು ಅಂದುಕೊಂಡಿದ್ದೀನಿ. ಅದರಲ್ಲಿ ನೀರು ಆಗೋದಿಕ್ಕೆ ಇಷ್ಟಪಡುವೆ. ಯಾಕಂದ್ರೆ ನೀರು ಯಾವುದೇ ಪಾತ್ರೆಗೆ ಹಾಕಿದರೂ ಅದು ಹೊಂದಿಕೊಳ್ಳುತ್ತೆ. ಜೊತೆಗೆ, ಮಗುವಾಗಿರಲೂ ಇಷ್ಟಪಡುವೆ ಎಂದರು.
ಡಾ.ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಬಗ್ಗೆ ದೊಡ್ಡ ಗೌರವ ಹೊಂದಿರುವ ಅರುಣ್ ಸಾಗರ್, ಅಣ್ಣಾವ್ರು ಹಾಗು ಪಾರ್ವತಮ್ಮ ರಾಜ್ಕುಮಾರ್ ಹುಟ್ಟುಹಾಕಿದ ವಜ್ರೇಶ್ವರಿ ಸಂಸ್ಥೆ ಬಗ್ಗೆ ಒಂದು ಅಚ್ಚರಿ ವಿಷಯ ಹೇಳಿದರು. ವಜ್ರೇಶ್ವರಿ ಸಂಸ್ಥೆ ತುಂಬಾ ಜನ ಕಲಾವಿದರಿಗೆ ಅವಕಾಶ ಕೊಡುವುದರ ಜೊತೆಗೆ ಜೀವನ ಕಟ್ಟಿಕೊಳ್ಳೋಕೆ ಸಹಾಯ ಮಾಡಿದೆ. ಅದರಲ್ಲಿ ನಾನೂ ಒಬ್ಬ. ನಾನು ಅಣ್ಣಾವ್ರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಈ ಪೈಕಿ ಅವರ ಕೊನೆಯ ಸಿನಿಮಾ ಶಬ್ದವೇದಿಯಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಕಲೆಯನ್ನು ನೋಡಿ ಪ್ರೋತ್ಸಾಹ ಮಾಡುವ ಗುಣ ಡಾ.ರಾಜ್ ಕುಮಾರ್ ಅವರದ್ದು, ಅದಕ್ಕೆ ನಾನೇ ಸಾಕ್ಷಿ ಎಂದು ತಿಳಿಸಿದರು.
![arun-sagar](https://etvbharatimages.akamaized.net/etvbharat/prod-images/kn-bng-02-acting-badhalu-art-deparntment-thubha-kushi-edie-arun-sagar-7204735_17012022170922_1701f_1642419562_889.jpg)
ಆಕಾಶ್, ಅಭಿ ಸಿನಿಮಾಗಳಿಗೆ ಕಲಾ ನಿರ್ದೇಶಕನಾಗಿ ಕೆಲಸ ಮಾಡುವಾಗ ಅಣ್ಣಾವ್ರು ಶೂಟಿಂಗ್ ಸ್ಪಾಟ್‌ಗೆ ಬಂದಿದ್ದರು. ಆಗ ನಾನು ಹಾಕಿರುವ ಸೆಟ್ಟು ನೋಡಿ ಯಾರು ಹಾಕಿದ್ದು? ಅಂತಾ ಕೇಳಿ ನನ್ನ ಕೆಲಸ ಮೆಚ್ಚಿಕೊಂಡಿದ್ದರು ಎಂದು ಅರುಣ್ ಸಾಗರ್ ಸ್ಮರಿಸುತ್ತಾರೆ.
ಪುನೀತ್ ರಾಜ್ ಕುಮಾರ್ ಜೊತೆ ನಾನು ರಾಮ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವರು ನಮ್ಮ ಕನ್ನಡ ಚಿತ್ರರಂಗವನ್ನು ದೊಡ್ಡಮಟ್ಟಕ್ಕೆ ಬೆಳೆಸಬೇಕೆಂಬ ಕನಸು ಕಂಡಿದ್ದರು. ಅಪ್ಪು ಅವರ ಕೊಡುಗೆ ಚಿತ್ರರಂಗಕ್ಕೆ ತುಂಬಾ ದೊಡ್ದದು. ಪ್ರತಿಯೊಬ್ಬರಿಗೂ ಕೊಡುವ ಗೌರವ, ವಿನಯವಂತಿಕೆ ಅವರಲ್ಲಿದ್ದ ದೊಡ್ಡ ಗುಣ ಎಂದರು.
ಸಮಯ ವ್ಯರ್ಥ ಮಾಡದೇ ಕೆಲಸ ಮಾಡುವ ಅರುಣ್ ಸಾಗರ್ಗೆ ಅಭಿನಯಕ್ಕಿಂತ ಸೆಟ್ಟುಗಳನ್ನು ಹಾಕೋದು ತುಂಬಾನೆ ಖುಷಿ ಕೊಡುತ್ತಂತೆ. ಫಿಟ್ನೆಸ್ ಸಿಕ್ರೇಸ್ ಏನಪ್ಪಾ ಅಂದ್ರೆ ಸದಾ ನಗುತ್ತಾ ಇರೋದು ಅಂತಾರೆ.
ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನು ಅರುಣ್ ಸಾಗರ್ ಮಾಡಿದ್ದಾರೆ. ಒಬ್ಬ ಮಾಂತ್ರಿಕ ನಿರ್ದೇಶಕ ಸಿನಿಮಾಗೆ ಕರೆದಾಗ ಹೇಗೆ ಆ್ಯಕ್ಟ್ ಮಾಡೋಕೆ ಆಗೋಲ್ಲ ಅನ್ನೋದು. ಈ ಕಾರಣಕ್ಕೆ ನಾನು ಅವರಿಗೋಸ್ಕರ ಒಂದು ಪಾತ್ರ ಮಾಡಿದ್ದೀನಿ ಎಂದು ಹೇಳಿದರು.
ಇದನ್ನೂ ಓದಿ: ತಂದೆಯ ಹೆಸರಿನಲ್ಲಿ 'ಟೈಗರ್ ಟಾಕೀಸ್' ನಿರ್ಮಾಣ ಸಂಸ್ಥೆ ಶುರು ಮಾಡಿದ ವಿನೋದ್ ಪ್ರಭಾಕರ್