ಬೆಂಗಳೂರು: ಬಹುಭಾಷಾ ನಟ, ಕನ್ನಡಿಗ ಅರ್ಜುನ್ ಸರ್ಜಾ ಶುಕ್ರವಾರ ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದ ಸ್ಯಾಂಡಲ್ವುಡ್ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆದರು.
ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಮಾತನಾಡಿದ ಅವರು, ಇಡೀ ರಾಜ್ಯವೇ ಪುನೀತ್ ರಾಜ್ ಕುಮಾರ್ ಬಗ್ಗೆ ಹೆಮ್ಮೆ ಪಡುತ್ತದೆ. ಕನ್ನಡಿಗರ ಮನಸ್ಸಿನಲ್ಲಿ ಅಪ್ಪು ದೃವತಾರೆಯಂತೆ ಅಚ್ಚಳಿಯದೇ ಉಳಿಯಲಿದ್ದಾರೆ ಎಂದರು.
ಪುನೀತ್ ಅಗಲಿಕೆಯನ್ನು ನಮಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆದರೆ, ಒಂದು ಮಾತ್ರ ಸತ್ಯ ಮುಂದೆ ಬರುವ ಯುವ ನಟರು ಮತ್ತು ಯುವಪೀಳಿಗೆಗೆ ಅವರು ಒಂದು ಉದಾಹರಣೆಯಾಗಿರಲಿದ್ದಾರೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ರಾಜ್ಯದ ಜನತೆ ನಿಮ್ಮ ಬಗ್ಗೆ ಹೆಮ್ಮೆ ಪಡಲಿದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂದಿಗೂ ಕನ್ನಡಿಗರ ಮನಸ್ಸಿನಲ್ಲಿ ದೃವತಾರೆಯಾಗಿ ಅಚ್ಚಳಿಯದಂತೆ ಉಳಿದಿರುತ್ತೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಪುನೀತ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ನಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಉತ್ಸಾಹ ಇದ್ದಂತಹ ವ್ಯಕ್ತಿಗೆ ಈ ರೀತಿ ಘಟನೆ ಆಗಿದ್ದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕ ದರ್ಶನಕ್ಕೆ ಸರ್ಕಾರ ದೊಡ್ಡ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿದೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.