ಮೈಸೂರು: ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಲಘು ಹೃದಯಾಘಾತ ಸಂಭವಿಸಿದೆ. ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಅರ್ಜುನ್ ಜನ್ಯ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅರ್ಜುನ್ ಜನ್ಯ ಮೈಸೂರಿನ ತಮ್ಮ ಮನೆಯಲ್ಲಿದ್ದಾಗ ಇಂದು ಮುಂಜಾನೆ ಹೃದಯಾಘಾತ ಸಂಭವಿಸಿದೆ. ಕುಟುಂಬದವರು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತುರ್ತು ನಿಗಾ ಘಟಕದಲ್ಲಿ ಜನ್ಯಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಲವಾರು ಸಿನಿಮಾಗಳಿಗೆ ಉತ್ತಮ ಸಂಗೀತ ನೀಡುವ ಮೂಲಕ ಅರ್ಜುನ್ ಜನ್ಯ ಸ್ಯಾಂಡಲ್ವುಡ್ನಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡಾ ಜನ್ಯ ಭಾಗವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.