ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ, ಹಿರಿಯ ನಟ ಅನಂತ್ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 72ನೇ ವಸಂತಕ್ಕೆ ಕಾಲಿಟ್ಟಿರುವ ಹಿರಿಯ ನಟನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಬರ್ತ್ಡೇ ಶುಭ ಕೋರಿದ್ದಾರೆ.
4 ಸೆಪ್ಟೆಂಬರ್ 1948 ರಲ್ಲಿ ಕೊಂಕಣಿ ಕುಟುಂಬದ ಸದಾನಂದ್ ನಾಗರಕಟ್ಟೆ ಹಾಗೂ ಆನಂದಿ ನಾಗರಕಟ್ಟೆ ದಂಪತಿಗೆ ಮುಂಬೈನಲ್ಲಿ ಜನಿಸಿದ ಅನಂತ್ ನಾಗ್ ಮೂಲ ಹೆಸರು ಅನಂತ್ ನಾಗರಕಟ್ಟೆ. ಕರಾಟೆ ಕಿಂಗ್ ಶಂಕರ್ ನಾಗ್, ಅನಂತ್ ನಾಗ್ ಅವರ ಪ್ರೀತಿಯ ಸಹೋದರ. ಕಾಲೇಜಿನಲ್ಲಿರುವಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅನಂತ್ ನಾಗ್, 1973ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
‘ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ನಾರದ ವಿಜಯ, ಅನುಪಮ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು, ಮನೆಯೇ ಮಂತ್ರಾಲಯ, ಗಣೇಶ ಸುಬ್ರಹ್ಮಣ್ಯ, ನಿಷ್ಕರ್ಷ, ಬೆಳದಿಂಗಳ ಬಾಲೆ, ಲಂಕೇಶ್ ಪತ್ರಿಕೆ, ಪಂಚರಂಗಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕವಲು ದಾರಿ ಸೇರಿದಂತೆ ಇದುವರೆಗೂ ಸುಮಾರು 270 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ್ನಾಗ್ ನಟಿಸಿದ್ದಾರೆ.
ಕನ್ನಡ ಸಿನಿಮಾಗಳು ಮಾತ್ರವಲ್ಲ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡಾ ಅನಂತ್ನಾಗ್ ನಟಿಸಿದ್ದಾರೆ. ‘ಸಿನಿಮಾಗಳ ಜೊತೆಜೊತೆಗೆ ಮಾಲ್ಗುಡಿ ಡೇಸ್, ಗರ್ವ, ಪ್ರೀತಿ ಇಲ್ಲದ ಮೇಲೆ, ಚಿಟ್ಟೆ ಹೆಜ್ಜೆ, ಲಾಟರಿ, ನಿತ್ಯೋತ್ಸವದಂತ ಧಾರಾವಾಹಿಗಳಲ್ಲಿ ಕೂಡಾ ಅನಂತ್ ನಾಗ್ ಅಭಿನಯಿಸಿದ್ದಾರೆ. ಇವುಗಳಲ್ಲಿ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ಅನಂತ್ನಾಗ್ ಸಹೋದರ ಶಂಕರ್ನಾಗ್ ನಿರ್ದೇಶಿಸಿದ್ದಾರೆ.
ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲಿ ಕೂಡಾ ಅನಂತ್ನಾಗ್ ಗುರುತಿಸಿಕೊಂಡಿದ್ದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಅನಂತ್ನಾಗ್ 1994ರಲ್ಲಿ ಬಿಡಿಎ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಆದರೆ ನಂತರ ಅವರು ರಾಜಕೀಯದಿಂದ ದೂರವಾದರು.
1987ರಲ್ಲಿ ಸಹನಟಿ ಗಾಯತ್ರಿ ಅವರನ್ನು ಅನಂತ್ನಾಗ್ ಕೈ ಹಿಡಿದರು. ಈ ದಂಪತಿಗೆ ಅದಿತಿ ಎಂಬ ಪುತ್ರಿ ಇದ್ದಾರೆ. ಅದಿತಿ ಹಾಗೂ ಮದುವೆಯಾದ ನಂತರ ಗಾಯತ್ರಿ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಸದ್ಯಕ್ಕೆ ಅನಂತ್ನಾಗ್ ನಟಿಸಿರುವ 'ಮೈಸೂರ್ ಮಸಾಲ', 'ಗಾಳಿಪಟ-2' ಬಿಡುಗಡೆಯಾಗಬೇಕಿದೆ.
ಈಟಿವಿ ಭಾರತದ ವತಿಯಿಂದ ಎವರ್ಗ್ರೀನ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು.