ರ್ಯಾಂಬೋ ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಅಭಿಮಾನಿಗಳಿಗೆ ಮನರಂಜನೆ ನೀಡಲು ಸಜ್ಜಾಗಿದೆ.
'ಅಧ್ಯಕ್ಷ ಇನ್ ಅಮೆರಿಕ' ಚಿತ್ರತಂಡದವರು ಸುದ್ದಿಗೋಷ್ಟಿ ನಡೆಸಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದರು. ಇದೇ ಅಕ್ಟೋಬರ್ 4ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಜನರ ಬಾಯಲ್ಲಿ ಗುನುಗುತ್ತಿದ್ದು, ಮನರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಈ ಸಿನಿಮಾ ತಯಾರಿಸಲಾಗಿದೆ. ಅಲ್ಲದೆ ಶರಣ್ ಈ ಹಿಂದೆ ನಟಿಸಿದ್ದ ಎಲ್ಲಾ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ಬಹಳ ವಿಭಿನ್ನವಾಗಿದೆ ಎಂದು ನಿರ್ದೇಶಕ ಯೋಗಾನಂದ್ ಹೇಳಿದರು.
ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಮೊದಲ ಬಾರಿಗೆ ನಾನು ನಾಯಕನಾಗಿ ನಟಿಸಿದ ಚಿತ್ರ ನಾಡಹಬ್ಬ ದಸರಾದಂದು ತೆರೆಗೆ ಬರುತ್ತಿದೆ. ಕನ್ನಡಿಗನಾಗಿ ಇದು ನನಗೆ ಬಹಳ ಹೆಮ್ಮೆಯ ವಿಷಯ. ದಸರಾ ಹಬ್ಬದ ಸಂಭ್ರಮದೊಂದಿಗೆ ನಮ್ಮ ಚಿತ್ರವನ್ನು ನೋಡಿ ಎಂಜಾಯ್ ಮಾಡಿ ನಮ್ಮನ್ನು ಹರಸಿ ಎಂದು ಶರಣ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.
'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ತುಪ್ಪದ ಹುಡುಗಿಗೆ 25ನೇ ಚಿತ್ರವಾಗಿದ್ದು, ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಈ ಸಂಭ್ರಮಿಸಿತು. ಇನ್ನು, ವಿಕ್ಟರಿ 2 ನಂತರ ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿದ್ದು, ಅಧ್ಯಕ್ಷ ಚಿತ್ರದಂತೆ ಈ ಚಿತ್ರವೂ ಸಹ ಗಲ್ಲಾಪಟ್ಟಿಗೆಯಲ್ಲಿ ಸದ್ದು ಮಾಡಲಿದೆ ಎಂಬ ಆಶಯ ಚಿತ್ರತಂಡದ್ದು.