ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿಮ್ಮಪ್ಪನ ದರ್ಶನ ಪಡೆಯಲು ಹೋಗಿದ್ದ ನಟಿ ತಾರಾ ತಿರುಪತಿಯಲ್ಲಿನ ನೆರೆಯ (Flood in Tirupati) ಅನುಭವವನ್ನು ಹಂಚಿಕೊಂಡಿದ್ದಾರೆ.
ಆಂಧ್ರಪ್ರದೇಶದಲ್ಲಿ ವರುಣಾರ್ಭಟ ಜೋರಾಗಿದೆ. ಈ ಹಿನ್ನೆಲೆ ತಿರುಮಲ ತಿರುಪತಿಯಲ್ಲಿ (Tirumala Tirupati) ಎರಡು ದಿನ ಭಕ್ತರಿಗೆ ದೇವರ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ತಿರುಪತಿ ಘಾಟ್ ರಸ್ತೆಗೆ ಹಾನಿಯಾಗಿರುವ ಕಾರಣ ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ (TTD) ರಿಪೇರಿ ಮಾಡಿಸುತ್ತಿದೆ.
ಈ ಸಮಯದಲ್ಲಿ ಸ್ಯಾಂಡಲ್ವುಡ್ನ ಹಿರಿಯ ನಟಿ ತಾರಾ (Kannada Actress Tara) ಕೂಡ ತಿರುಪತಿಯಲ್ಲೇ ಇದ್ದರು. ಈಗ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದಾರೆ.
ನಿನ್ನೆ (ಶುಕ್ರವಾರ) ನಮಗೆ ತಿರುಮಲದಲ್ಲಿ ದೇವರ ದರ್ಶನ ಇತ್ತು. ಮೊನ್ನೆ (ಗುರುವಾರ) ಬೆಂಗಳೂರಿನಿಂದ ಹೊರಟೆವು. ಬೆಂಗಳೂರು ಬಿಡುವಾಗಲೇ ಇಲ್ಲಿ ಜಿಟಿ ಜಿಟಿ ಮಳೆ ಶುರುವಾಗಿತ್ತು. Yellow ಅಥವಾ Red ಅಲರ್ಟ್ ಇಲ್ಲ ಅನ್ನೋದನ್ನ ಮೊದಲೇ ತಿಳಿದುಕೊಂಡಿದ್ವಿ. ಮತ್ತೆ ತಿರುಮಲಕ್ಕೂ ಫೋನ್ ಕರೆ ಮಾಡಿದ್ವಿ.
ಅವರು ಯಾವುದೇ ಅಡ್ಡಿಯಿಲ್ಲ ದರ್ಶನಕ್ಕೆ ಬರಬಹುದು ಎಂದು ಹೇಳಿದರು. ಬಳಿಕ ನಾವು ನಮ್ಮ ಪ್ರಯಾಣ ಆರಂಭ ಮಾಡಿದ್ವಿ. ದಾರಿಯುದ್ದಕ್ಕೂ ಜಿಟಿ ಜಟಿ ಮಳೆ ಬರ್ತಾನೆ ಇತ್ತು. ನಾವು ತಿರುಪತಿ ತಲುಪುವಷ್ಟರಲ್ಲಿ ಮೊಣಕಾಲುದ್ದಕ್ಕೆ ನೀರು ಬಂದಿತ್ತು. ಅದನ್ನು ಕಂಡು ಗಾಬರಿಯಾಯ್ತು.
ಅಂಗಡಿ ಎಲ್ಲ ತೆರದಿದ್ದರೂ ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿತ್ತು. ನಮ್ಮ ಗಾಡಿ ಮತ್ತು ಮುಂದಿರುವ ವಾಹನಗಳು ಮುಂದೆ ಮುಂದೆ ಸಾಗುತ್ತಿದ್ದವು. ಇದರಿಂದ ನಾವು ಮುಂದೆ ಈ ಪರಿಸ್ಥಿತಿ ಇರಲಿಕ್ಕಿಲ್ಲ ಎಂದುಕೊಂಡು ಪ್ರಯಾಣ ಮುಂದುವರೆಸಿದ್ವಿ ಎಂದು ಹೇಳಿದರು.
ಕೆಲ ಹೊತ್ತಿನ ಬಳಿಕ ನಮಗೆ ತಿರುಮಲದಿಂದ ಕರೆ ಬಂತು. ನೀವು ತಿರುಪತಿಯ ಬೆಟ್ಟವನ್ನು ಹತ್ತಲು ಸಾಧ್ಯವಿಲ್ಲ. Red Alert ಘೋಷಣೆ ಮಾಡಿದ್ದಾರೆ ಅಂತಾ.. ಇಲ್ಲಿ ಭೂಕುಸಿತವಾಗಿ ಮರಗಳೆಲ್ಲ ನೆಲಕ್ಕುರುಳಿವೆ. ಆದ್ದರಿಂದ ನೀವು ತಿರುಪತಿಯಲ್ಲಿ ಉಳಿದುಕೊಳ್ಳಿ. ಬೆಳಗ್ಗೆ ನೀವು ದರ್ಶನ ಮಾಡಬಹುದು ಎಂದು ಹೇಳಿದರು.
ಅವರೇ ನಮಗೆ ರೂಂ ಬುಕ್ ಮಾಡಿ ವಿಳಾಸ ನೀಡಿದರು. ನಮಗೆ ಬುಕ್ ಆದ ಹೋಟೆಲ್ ಹತ್ತಿರಕ್ಕೆ ಹೋಗುತ್ತಿದ್ದೆವು. ಆ ನೀರು ಎಷ್ಟು ರಭಸವಾಗಿ ಹರಿಯುತ್ತಿತ್ತು ಅಂದರೆ ಅದು ನಮ್ಮ ಕಾರಿನ ಕಿಟಕಿವರೆಗೂ ತಲುಪಿತ್ತು ಎಂದು ಹೇಳಿದರು.
ನೀರು ಹೆಚ್ಚಾದಂತೆ ನಮ್ಮ ಕಾರು ತೇಲಲು ಶುರುವಾಯ್ತು. ತಕ್ಷಣವೇ ಇಂಜಿನ್ (Engine) ಆಫ್ ಆಯ್ತು. ನಮ್ಮ ಕಾರು ಚಾಲಕರು ಆ ಕ್ಷಣಕ್ಕೆ ದಿಗ್ಭ್ರಾಂತರಾದರು. ನಾವು ಅವರಿಗೆ ವಾಪಸ್ ತರೋಕೆ ಹೊರಟು ಹೋಗೋಣಾ ಅಂತಿದ್ವಿ. ಆದರೆ, ಇಂಜಿನ್ ಆಫ್ ಆಗಿದೆ, ಸ್ಟಾರ್ಟೇ ಆಗ್ತಿಲ್ಲ ಅಂದ್ರು.
ಕೊನೆಗೂ ಸ್ವಲ್ಪ ಕ್ಷಣದ ಬಳಿಕ ನಮ್ಮ ಕಾರು ಸ್ಟಾರ್ಟ್ ಆಯ್ತು. ಯು-ಟರ್ನ್ (U-Turn) ಕೂಡ ತಗೊಂಡ್ವಿ. ಹಾಗೋ ಹೀಗೋ ಮಾಡಿ ಕೊನೆಗೆ ಒಂದು ಕಡೆ ತಲುಪಿದ್ವಿ. ಅಲ್ಲಿ ನೀರು ತುಂಬಾ ಸಣ್ಣದಾಗಿ ಹರಿತಿತ್ತು. ಮಳೆ ಬರುತ್ತಿತ್ತು. ನಾವು ನೋಡಿದರೆ ಅದು ಬೆಂಗಳೂರು ಹೆದ್ದಾರಿಯಾಗಿತ್ತು (Bangalore Highway) ಎಂದು ತಿಳಿಸಿದರು.
ಇದನ್ನು ನೋಡಿ ನನ್ನ ಮಗ ಗಾಬರಿಯಿಂದ ಅಳೋದಕ್ಕೆ ಶುರು ಮಾಡಿದ. ನಮ್ಮ ಜತೆ ಯಜಮಾನ್ರು ಇರಲಿಲ್ಲ. ಆತ ಅಪ್ಪನಿಗೆ ನೋಡಬೇಕು ಅಂತಾ ಅಳೋದಕ್ಕೆ ಶುರು ಮಾಡಿದ. ಇದನ್ನ ದೇವರೇ ಹೇಳುತ್ತಿದ್ದಾನೆ ಅಂದುಕೊಂಡು ವಾಪಸ್ ಬೆಂಗಳೂರಿಗೆ ಹೊರಟೆ ಬಿಟ್ವಿ. ನಾವು ಬೆಂಗಳೂರಿನ ಕಡೆ ಪ್ರಯಾಣ ಶುರು ಮಾಡಿ 10-15 km ದೂರ ಬಂದಾಗ ನಮಗೆ ತಿರುಮಲದಿಂದ ಕರೆ ಬಂತು.
ಇಲ್ಲಾ ಎರಡು ದಿನ ಆಗಲ್ಲಾ ಅನ್ಸುತ್ತೆ ನೀವು ಬೆಂಗಳೂರಿಗರ ಹೋಗಿ ಅಂದ್ರು. ಬೆಂಗಳೂರಿನ ಮಾರ್ಗ ಮಧ್ಯೆ ನಮ್ಮ ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಒಂದು ಕಾರು ನೀರಿನಲ್ಲಿ ತೇಲುತ್ತ ಹೋಗ್ತಿತ್ತು. ಕತ್ತಲು ಕೂಡ ಆಗಿತ್ತು. ಇದರಿಂದ ನಮ್ಮ ಚಾಲಕರು ಮುಂದೆ ಹೋಗಲು ಭಯವಾಗಿ ಕಾರು ನಿಲ್ಲಿಸಿದರು ಎಂದರು.
ಆಗ ನಮ್ಮಣ್ಣ ಹಳ್ಳಿ ಒಳಗೆ ಹೋಗೋಣ ಅಂದರು. ಸರಿ ಅಂತಾ ಅಲ್ಲಿ ತಿರುಗಿಸಿ ಹೊರಟ್ವಿ. ನಮಗೆ ಆ ದಾರಿ ಕೂಡ ಗೊತ್ತಿಲ್ಲ. ಹಿಂದೆ ನೋಡಿದರೆ ಹತ್ತಾರು ವಾಹನಗಳು ನಮ್ಮನ್ನ ಫಾಲೋ ಮಾಡ್ತಿದ್ವು. ನಾವು ನಿಂತರೆ ಅವರು ನಿಲ್ತಾರೆ ಅಂತಾ ಹಾಗೆ ಹೊರಟೆವು. ಸುಮಾರು ಹೊತ್ತು ಹಳ್ಳಿಗಳಲ್ಲೇ ಸುತ್ತಿದ ಬಳಿಕ ಒಂದು ರಿಂಗ್ ರೋಡ್ (Ring Road) ಥರದ್ದು ಕಾಣ್ತು.
ಅಲ್ಲಿ ಬಂದ್ವಿ ಅದೃಷ್ಟವಶಾತ್ ಅದು ಚಿತ್ತೂರು-ಬೆಂಗಳೂರು ಹೆದ್ದಾರಿ (Chitturu-Bangalore Highway) ಆಗಿತ್ತು. ಅಲ್ಲಿಂದ ನಾವು ಮನೆಗೆ ಬಂದ್ವಿ. ಬರುವಷ್ಟರಲ್ಲಿ ಬೆಳಗಿನ ಜಾವ 4.30 ಆಗಿತ್ತು. ದೇವರ ದಯೆಯಿಂದ ನಾವು ಸುರಕ್ಷಿತವಾಗಿ ಮನೆಗೆ ತಲುಪಿದ್ವಿ ಎಂದು ತಮ್ಮ ರೋಚಕ ಅನುಭವವನ್ನು ನಟಿ ತಾರಾ ಬಿಚ್ಚಿಟ್ಟರು.
ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ : ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ 'Yellow alert'