ಬೆಂಗಳೂರು: ಬಹುಭಾಷಾ ನಟಿ ಸಂಜನಾ ಗಲ್ರಾನಿ ಬಾಳಲ್ಲಿ ಹೊಸ ಪರ್ವ ಶುರುವಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಂಜನಾ ತಾಯಿಯಾಗುತ್ತಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದ ಸಮಯದಲ್ಲಿ ಸ್ವತಃ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಸಂಜನಾ, ಹೌದು ನಾನು ತಾಯಿ ಆಗುತ್ತಿದ್ದೇನೆ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಮದುವೆ, ಡ್ರಗ್ಸ್ ಕೇಸ್ ಮುಂತಾದ ಕಾರಣಗಳಿಂದ ಕಳೆದ ಒಂದೂವರೆ ವರ್ಷಗಳಿಂದಲೂ ಸಂಜನಾ ಸುದ್ದಿಯಲ್ಲಿದ್ದಾರೆ. ಈ ನಡುವೆಯೇ ಇದೀಗ ನಟಿ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಸಂಜನಾ ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ.
2021 ಜೂನ್ 3ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಂಜನಾ, ಮದುವೆ ವಿಚಾರ ಬಿಚ್ಚಿಟ್ಟರು. ಕಳೆದ ಲಾಕ್ಡೌನ್ನಲ್ಲಿ ನನ್ನ ಮದುವೆಯಾಯ್ತು. ನಾನಾ ಕಾರಣಗಳಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಆಗಲಿಲ್ಲ. ದೊಡ್ಡದಾಗಿ ಸೆಲೆಬ್ರೇಷನ್ ಮಾಡಬೇಕು ಅನ್ಕೊಂಡಿದ್ದೆ. ಚಿತ್ರರಂಗದ ಅಣ್ಣ-ತಮ್ಮಂದಿರಿಗೆ ಊಟ ಹಾಕಿಸೋಕೆ ಆಗಲಿಲ್ಲ ಅನ್ನೋ ಕೊರಗಿದೆ ಎಂದಿದ್ದರು.
ನಟಿ ಸಂಜನಾ ಮುಸ್ಲಿಂ ಸಂಪ್ರದಾಯದಂತೆ ವೈದ್ಯ ಅಜೀಜ್ ಪಾಷ ಅವರನ್ನು ಮದುವೆಯಾಗಿದ್ದರು. ಇದಕ್ಕೆ ಪೂರಕ ಎಂಬಂತೆ ಮದುವೆಯ ಫೋಟೋ ಕೂಡ ವೈರಲ್ ಆಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
'ಸೊಗ್ಗಾಡು' ತೆಲುಗು ಚಿತ್ರದ ಮೂಲಕ 2005ರಲ್ಲಿ ಸಿನಿ ಜರ್ನಿ ಆರಂಭಿಸಿದ ಸಂಜನಾ, ತೆಲುಗಿನ ಜನಪ್ರಿಯ ಸಿನಿಮಾ 'ಬುಜ್ಜಿಗಾಡು'ನಲ್ಲಿ ಸಹ ಅಭಿನಯಿಸಿದ್ದಾರೆ. ಬಳಿಕ 2006ರಲ್ಲಿ ಗಂಡ-ಹೆಂಡತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗಟ್ಟಿ ನೆಲೆ ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಸೀಕ್ರೆಟ್ ಆಗಿ ಹಸೆಮಣೆ ಏರಿದ ಉರಿ ಚಿತ್ರದ ನಟ.. ಫೋಟೋ ವೈರಲ್!