ಕೊರೊನಾ ಲಾಕ್ ಡೌನ್ ಸಮಯದಲ್ಲಿ ನಿರಂತರ ಸಾಮಾಜಿಕ ಸೇವೆ ಮಾಡಿದ ಸೆಲಬ್ರಿಟಿ ಎಂದರೆ ರಾಗಿಣಿ ದ್ವಿವೇದಿ. ಸಿನಿಕಾರ್ಮಿಕರು, ಮಾಧ್ಯಮದವರು, ಕೊರೊನಾ ವಾರಿಯರ್ಸ್ ಹಾಗೂ ಇತರರಿಗೆ ತಾವೇ ಖುದ್ದು ನಿಂತು ಆಹಾರ ಕಿಟ್, ವೈದ್ಯಕೀಯ ಕಿಟ್ ವಿತರಿಸಿ ಮಾನವೀಯೆ ಮೆರೆದಿದ್ದರು.
ಇಷ್ಟೇ ಅಲ್ಲ, ಗುಡಿಸಲು ಕಳೆದುಕೊಂಡ ವಲಸೆ ಕಾರ್ಮಿಕರಿಗೆ ಶೌಚಾಲಯ ನಿರ್ಮಾಣ, ಹಸಿದವರಿಗೆ ಅನ್ನ ನೀಡುವುದು, ರೋಗಿಗಳ ಸೇವೆ ಮಾಡುತ್ತಿರುವ ವೈದ್ಯರಿಗೆ ತಾವೇ ಅಡುಗೆ ಮಾಡಿ ಕಳಿಸುವುದು ಸೇರಿ ಅನೇಕ ಕೆಲಸಗಳನ್ನು ತಮ್ಮ ಆರ್ಡಿ ವೆಲ್ಫೇರ್ ಅಸೋಸಿಯೇಷನ್ ಮೂಲಕ ಮಾಡಿದ್ದರು.
ರಾಗಿಣಿ ಅವರ ಈ ಸಾಮಾಜಿಕ ಸೇವೆಯನ್ನು ಗುರುತಿಸಿ ಇಂಟರ್ನ್ಯಾಷನಲ್ ಎಕ್ಸ್ಕ್ಲೂಸಿವ್ ಇಂಟರ್ನ್ಯಾಷನಲ್ ಅವಾರ್ಡ್ ನೀಡಿ ಸನ್ಮಾನಿಸಲಾಗಿದೆ. ಇಂದು ಬೆಳಗ್ಗೆ ಮತ್ತೆ ರಾಗಿಣಿ ತಮ್ಮ ಮನೆ ಬಳಿ ಕೆಲಸ ಮಾಡುವ ಬಿಬಿಎಂಪಿ ನೌಕರರಿಗೆ ಬನ್ ಹಾಗೂ ಟೀ ನೀಡಿ ಉಪಚರಿಸಿದ್ದಾರೆ. ಲಾಕ್ ಡೌನ್ ವೇಳೆ ಕೂಡಾ ರಾಗಿಣಿ ಬಿಬಿಎಂಪಿ ನೌಕರರಿಗೆ ಟೀ, ಸ್ನ್ಯಾಕ್ಸ್ ನೀಡಿ ಉಪಚರಿಸಿದ್ದರು. ಇದೀಗ ಮತ್ತೆ ಬಿಬಿಎಂಪಿ ನೌಕರರನ್ನು ತಮ್ಮ ಮನೆ ಬಳಿ ಉಪಚರಿಸಿದ್ದಾರೆ. ಅಷ್ಟೇ ಅಲ್ಲ ಅವರೊಂದಿಗೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿ ಕೊರೊನಾ ಬಾರದಂತೆ ಮುಂಜಾಗ್ರತೆ ವಹಿಸಿ ಎಂದು ಮನವಿ ಮಾಡಿದ್ದಾರೆ.
ರಾಗಿಣಿ ಅವರ ಈ ಉಪಚಾರಕ್ಕೆ ಪೌರ ಕಾರ್ಮಿಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟಿ ಆದರೂ ಯಾವುದೇ ಅಹಂ ಇಲ್ಲದೆ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ಟೀ-ಬನ್ ಕೊಟ್ಟು ಉಪಚರಿಸಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ರಾಗಿಣಿ ಅವರ ಸಮಾಜ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಹಾರೈಸೋಣ.