ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟಿ ಪ್ರಣೀತಾ ಸುಭಾಷ್, ಸ್ಯಾಂಡಲ್ವುಡ್ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ನಟಿ. ಸದ್ಯ ಪೋರ್ಕಿ ಬೆಡಗಿ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಮೌನ ಮುರಿದಿರುವ ನಟಿ ಮ್ಯಾರೇಜ್ ರಹಸ್ಯ ಬಿಚ್ಚಿಟ್ಟಿದ್ದಾರೆ.
ಉದ್ಯಮಿ ನಿತಿನ್ ರಾಜ್ ಎಂಬುವರ ಜೊತೆ, ಕನಕಪುರ ರಸ್ತೆಯ ರೆಸಾರ್ಟ್ವೊಂದರಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಪ್ರಣೀತಾ ಹಸೆಮಣೆ ಏರಿದ್ದಾರೆ ಎನ್ನಲಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಪ್ರಣೀತಾಗೆ ಕರೆ ಮಾಡಿ ಏನ್ ಮೇಡಂ, ಮದುವೆ ಆದ್ರಂತೆ ನಿಜಾನಾ ಅಂತಾ ಕೇಳಿದ್ರೆ, ಯಾರು ಹೇಳಿದ್ದು, ಆ ರೀತಿ ಮದುವೆ ಆದರೆ, ನಾನು ನಿಮಗೆ ಹೇಳೋಲ್ವಾ ಅಂತಾ ಜಾಣ್ಮೆಯ ಉತ್ತರ ಕೊಟ್ಟಿದ್ದರು.
ಆದ್ರೆ, ಇದೀಗ ಪ್ರಣೀತಾ ಸುಭಾಷ್ ಮದುವೆ ಆಗಿರೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ನಟಿ, ನಾನು ಹಾಗೂ ನಿತಿನ್ ಮೇ 30ರಂದು ಕುಟುಂಬದ ತೀರಾ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದೇವೆ. ನಮ್ಮ ಮದುವೆಯ ದಿನಾಂಕವನ್ನು ತಿಳಿಸದೇ ಇದ್ದ ಕಾರಣಕ್ಕೆ ನಿಮ್ಮ ಕ್ಷಮೆ ಕೋರುತ್ತೇವೆ.
ಏಕೆಂದರೆ, ಲಾಕ್ಡೌನ್ ಹಿನ್ನೆಲೆ ಮದುವೆಯ ಹಿಂದಿನ ದಿನದವರೆಗೂ ಯಾವಾಗ ವಿವಾಹ ನಡೆಯುತ್ತದೆ ಎನ್ನುವುದು ನಮಗೇ ತಿಳಿದಿರಲಿಲ್ಲ. ಇದರಿಂದ ನಿಮಗೆ ಹೇಳಲು ಸಾಧ್ಯವಾಗಿಲ್ಲ. ಈ ವಿಶೇಷ ದಿನ ನಮ್ಮ ಪ್ರೀತಿಪಾತ್ರರೆಲ್ಲರೂ ನಮ್ಮ ಜೊತೆಗೆ ಇರಬೇಕಿತ್ತು. ಆದರೆ, ಕ್ಷಮೆ ಇರಲಿ, ಕೋವಿಡ್‌ನ ಈ ಪರಿಸ್ಥಿತಿ ತಿಳಿಯಾದ ಬಳಿಕ ನಿಮ್ಮೆಲ್ಲರ ಜೊತೆಗೂಡಿ ಸಂಭ್ರಮಿಸುವೆ ಎಂದು ಪ್ರಣೀತಾ ಸುಭಾಷ್ ಮದುವೆ ರಹಸ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ.