ಸ್ಯಾಂಡಲ್ವುಡ್ ನಟರ ಅಮ್ಮ ಎಂದು 'ಮುಂಗಾರು ಮಳೆ' ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಪದ್ಮಜಾ ರಾವ್, ಕಿರುತೆರೆಯಿಂದ ತಮ್ಮ ಸಿನಿಪಯಣ ಆರಂಭಿಸಿದವರು. ದಿವಂಗತ ವೈಶಾಲಿ ಕಾಸರವಳ್ಳಿ ನಿರ್ದೇಶನದ 'ಮೂಡಲ ಮನೆ' ಧಾರಾವಾಹಿಯಿಂದ 'ಶಕ್ಕು' ಎಂದೂ ಕೂಡಾ ಅವರು ಖ್ಯಾತರಾಗಿದ್ದಾರೆ.
ಪದ್ಮಜಾರಾವ್ ಕೇವಲ ನಟಿ ಮಾತ್ರವಲ್ಲ ನಿರ್ಮಾಪಕಿಯಾಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದೀಗ ಅವರು ವಸ್ತ್ರವಿನ್ಯಾಸಕಿ ಆಗಿಯೂ ಹೆಸರು ಮಾಡಲು ಹೊರಟಿದ್ದಾರೆ. ಮುಂದೆ ಸಿನಿಮಾಗಳನ್ನು ನಿರ್ದೇಶನ ಮಾಡಲು ಕೂಡಾ ಪ್ಲಾನ್ ಮಾಡಿಕೊಂಡಿದ್ದಾರೆ ಪದ್ಮಜಾ ರಾವ್. ನಾಲ್ಕು ಕಥೆಗಳನ್ನು ತಯಾರಿಸಿ ನಿರ್ಮಾಪಕರಿಗಾಗಿ ಹುಡುಕಾಡುತ್ತಿದ್ದ ಅವರಿಗೆ ಯೋಗರಾಜಭಟ್ಟರು ಸಾಥ್ ನೀಡಿದ್ದಾರೆ. ಪದ್ಮಜಾ ರಾವ್ ಅವರ ಕಥೆ ಕೇಳಿದ ಭಟ್ಟರು 'ಪದ್ಮಮ್ಮ ಸ್ವಲ್ಪ ದಿನಗಳ ಕಳೆದ ನಂತರ ನಿಮ್ಮ ಸಿನಿಮಾವನ್ನು ನಾನೇ ನಿರ್ಮಿಸುತ್ತೇನೆ ಎಂದು ಕೂಡಾ ಹೇಳಿದ್ದಾರಂತೆ. ಇನ್ನು 'ಸವರ್ಣದೀರ್ಘಸಂಧಿ’ ಸಿನಿಮಾ ಮೂಲಕ ಪದ್ಮಜಾ ರಾವ್ ವಸ್ತ್ರ ವಿನ್ಯಾಸಕಿ ಆಗುವ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಳೆದ 10 ವರ್ಷಗಳಿಂದ ಪದ್ಮಜಾ ಅವರಿಗೆ ಸ್ನೇಹಿತರಾಗಿರುವುದರಿಂದ ಪದ್ಮಜಾ ಅವರು ಈ ಚಿತ್ರದಲ್ಲಿ ತಮ್ಮನ್ನು ಪೂರ್ತಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರಗಳಿಗಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತ್ರಗಳನ್ನು ಖರೀದಿ ಮಾಡಿದ್ದಾರೆ. ಚಿತ್ರದ ನಾಯಕಿ ಕೃಷ್ಣ ಅವರಿಗೆ ವಿಶೇಷ ಡ್ರೆಸ್ಗಳನ್ನು ಡಿಸೈನ್ ಮಾಡಿದ್ದಾರೆ. ವೀರೇಂದ್ರ ಶೆಟ್ಟಿ ಈ ಮುನ್ನ ತುಳುವಿನ 'ಚಾಲಿಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದು ಆ ಸಿನಿಮಾದಲ್ಲಿ ಪದ್ಮಜಾ ಕೂಡಾ ನಟಿಸಿದ್ದರು. ನಮಗೆ ಈಗ ಅನ್ನ ನೀಡುತ್ತಿರುವುದು 'ಸವಾಲಿಗೆ ಸೈ' ಎಂಬ ಶೋ ನಿರ್ಮಾಣದಿಂದ ಎಂದು ಪದ್ಮಜಾ ಹೇಳಿಕೊಂಡಿದ್ದಾರೆ. ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದು ಕಾರ್ಯಕ್ರಮದ ಎರಡನೇ ಕಂತು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಇನ್ನು ಪದ್ಮಜಾಗೆ ಸಂಜೀವ್ ಎಂಬ ಮಗನಿದ್ದು ಕನಕಪುರ ರಸ್ತೆಯಲ್ಲಿ ಮಿನಿ ಮೃಗಾಲಯವೊಂದನ್ನು ಆರಂಭಿಸಿದ್ದಾರೆ ಎಂದು ಮಗನ ಬಗ್ಗೆ ಹೇಳಿಕೊಂಡು ಸಂತೋಷ ವ್ಯಕ್ತಪಡಿಸುತ್ತಾರೆ ಪದ್ಮಜಾ ರಾವ್.