ಗ್ಲ್ಯಾಮರ್ ಪಾತ್ರಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿಯನ್ನು ಹೊಂದಿರುವ ನಟಿ ನಿಶ್ವಿಕಾ ನಾಯ್ಡು. ಸದ್ಯ ಟೀಸರ್ ಹಾಗು ಹಾಡುಗಳಿಂದ ಸ್ಯಾಂಡಲ್ ವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿರೋ 'ಸಖತ್' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಿಶ್ವಿಕಾ ನಾಯ್ಡು ಸ್ಕ್ರೀನ್ ಹಂಚಿಕೊಂಡಿದ್ದಾರೆ.
ಇದೇ ನವೆಂಬರ್ 26ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಸಖತ್ ಸಿನಿಮಾ ಬಗ್ಗೆ ನಟಿ ನಿಶ್ವಿಕಾ ನಾಯ್ಡು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಚಾಲೆಂಜಿಂಗ್ ಪಾತ್ರ ಮಾಡಿರುವ ನಿಶ್ವಿಕಾ ನಾಯ್ಡು, ಈ ಪಾತ್ರ ಒಪ್ಪಿಕೊಳ್ಳಲು ಕಾರಣ ಸಿನಿಮಾ ಕಥೆಯಂತೆ. ನಿರ್ದೇಶಕ ಸಿಂಪಲ್ ಸುನಿ ಸರ್ ಕಥೆ ಹೇಳಿದಾಗ ಸಖತ್ ಥ್ರಿಲ್ ಎನಿಸಿತ್ತು ಅಂತಾರೆ ನಿಶ್ವಿಕಾ ನಾಯ್ಡು.
ಈ ಚಿತ್ರದಲ್ಲಿ ದಿವ್ಯಾಂಗ ಪಾತ್ರ ಮಾಡಿರುವ ನಿಶ್ವಿಕಾ ನಾಯ್ಡು, ಏಕಾಏಕಿ ಸಿನಿಮಾ ಚಿತ್ರೀಕರಣಕ್ಕೆ ಬರಲಿಲ್ಲ. ನಿರ್ದೇಶಕ ಸುನಿ ಅವರ ಮಾರ್ಗದರ್ಶನದಲ್ಲಿ ಈ ಪಾತ್ರಕ್ಕೆ ಒಂದಿಷ್ಟು ಸಿದ್ಧತೆಗಳನ್ನ ಮಾಡಿಕೊಂಡು ಬಂದು ಈ ಪಾತ್ರಕ್ಕೆ ಜೀವ ತುಂಬಿದ್ದೇನೆ ಅಂತಾ 'ಈಟಿವಿ ಭಾರತ'ಕ್ಕೆ ತಿಳಿಸಿದರು.
Sakath film: ಸಖತ್ ಸಿನಿಮಾ ಶೂಟಿಂಗ್ ಸ್ಪಾಟ್ಗೆ ಹೋದಾಗ ಅಲ್ಲಿ ಅಂಧ ಮಕ್ಕಳನ್ನು ಕರೆಸಿದ್ದರು. ಆಗ ನಾನು ಆ ಮಕ್ಕಳ ಜೊತೆ ಒಂದು ಗಂಟೆ ಕಾಲ ಬೆರೆತು ಅವರ ಹಾವ-ಭಾವಗಳನ್ನು ನೋಡಿಕೊಂಡೆ. ನನಗದು ಅಭಿನಯ ಮಾಡಬೇಕಾದರೆ ತುಂಬಾನೇ ಉಪಯೋಗವಾಯ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ಬ್ಲೈಂಡ್ ಆಗಿ ನಡೆದಾಡೋದನ್ನು ಪ್ರಾಕ್ಟೀಸ್ ಮಾಡಿ ನಂತರ ಸಿನಿಮಾದಲ್ಲಿ ಅಭಿನಯ ಮಾಡಿದ್ದೀನಿ ಎಂದರು.
ನಟ ಗಣೇಶ್ ಸಿಂಪಲ್ ವ್ಯಕ್ತಿ:
ಗಣೇಶ್ ಸರ್ ಜೊತೆ ವರ್ಕ್ ಮಾಡಬೇಕು ಅಂತ ಸಾಕಷ್ಟು ಕಡೆ ಹೇಳಿಕೊಂಡಿದ್ದೆ. ಆ ಆಸೆ ಸಖತ್ ಸಿನಿಮಾ ಮೂಲಕ ಈಡೇರಿದೆ. ಗಣೇಶ್ ಸರ್ ಜೊತೆ ಸ್ಕ್ರೀನ್ ಶೇರ್ ಮಾಡೋದು ತುಂಬಾ ಕೂಲ್ ಆಗಿ ಇರುತ್ತೆ. ಅವರು ಬಹಳಾನೇ ಸಿಂಪಲ್ ವ್ಯಕ್ತಿ ಅಂತಾರೆ ನಟಿ ನಿಶ್ವಿಕಾ.
ನಾನು ಪಕ್ಕಾ ಬೆಂಗಳೂರಿನ ಹುಡುಗಿ
ಈ ಬ್ಲೈಂಡ್ ಪಾತ್ರದಲ್ಲಿ ನನ್ನನ್ನು ಪ್ರೇಕ್ಷಕರು ಹೇಗೆ ರಿಸೀವ್ ಮಾಡ್ತಾರೆ ಅನ್ನೋದರ ಬಗ್ಗೆ ನನಗೆ ಕುತೂಹಲ ಇದೆ. ನನ್ನನ್ನು, ನೀವು ಆಂಧ್ರದವರಾ ಎಂದು ತುಂಬಾ ಜನ ಕೇಳ್ತಾರೆ. ನಿಜವಾಗ್ಲೂ ನಾನು ಪಕ್ಕಾ ಬೆಂಗಳೂರಿನ ಹುಡುಗಿ. ನನ್ನ ಹೆಸರಿನಿಂದ ತುಂಬಾ ಜನ ಆಂಧ್ರದವಳು ಅಂತಾ ತಿಳಿದುಕೊಂಡಿದ್ದಾರೆ ಅಂತಾ ಹೇಳಿದ್ರು.
ಇದನ್ನೂ ಓದಿ: ವಿದೇಶಕ್ಕೆ ಹಾರಿದ ರಶ್ಮಿಕಾ: ಕೈಯಲ್ಲಿ ಪಾಸ್ಪೋರ್ಟ್ ಹಿಡಿದು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ನಟಿ
ಗೊಂಬೆ ತರ ಕಾಣೋದಿಕ್ಕೆ ಯಾರು ಕಾರಣ ಅಂತಾ ಕೇಳಿದ್ರೆ, ನನ್ನ ಕಾಸ್ಟ್ಯೂಮ್ ಡಿಸೈನರ್ ಹಾಗು ಮೇಕಪ್ ಮಾಡುವವರು ಎಂದರು. ನಿಜವಾಗ್ಲೂ ನಾನು ಕ್ಯಾಮರಾ ಹಿಂದೆ ಸಿಂಪಲ್ ಆಗಿ ಇರೋದಿಕ್ಕೆ ಇಷ್ಟ ಪಡ್ತೀನಿ. ತೆಲುಗು ಹಾಗು ತಮಿಳು ಸಿನಿಮಾಗಳಿಂದ ಆಫರ್ ಬಂದಿದೆಯಾ ಅನ್ನೋ ಪ್ರಶ್ನೆಗೆ, ಹಾಗೇನು ಇಲ್ಲ, ನಾನು ಕನ್ನಡದಲ್ಲಿ ಸಿನಿಮಾ ಮಾಡ್ತಿದ್ದೇನೆ. ಬೇರೆ ಭಾಷೆಯಲ್ಲೂ ನಟನೆಗೆ ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಅಭಿನಯಿಸುತ್ತೇನೆ ಎಂದ್ರು.