ನಟ ಚಿರಂಜೀವಿ ಸರ್ಜಾ ಮಡದಿ ಮೇಘನಾ ರಾಜ್ ಮದುವೆ ನಂತರ ಮೊನ್ನೆಯಷ್ಟೆ ಹೊಸ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಇದೀಗ ತಮ್ಮ ಸಿನಿ ಕೆರಿಯರ್ನಲ್ಲಿ ಹೊಸ ಹೆಜ್ಜೆ ಇರಿಸಿದ್ದಾರೆ ಈ ರಾಜಾಹುಲಿ ಚೆಲುವೆ.
ಮೇಘನಾ ರಾಜ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇಂದು ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸೆಟ್ಟೇರುತ್ತಿರುವ ‘ಪುಟಾಣಿ ಪಂಟರ್ಸ್’ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಮೇಘನ ರಾಜ್ ಬಾಲ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅಪ್ಪನ (ನಟ ಸುಂದರ್ ರಾಜ್) ಜೊತೆ ನಾಟಕಗಳಲ್ಲೂ ಸಹ ಅಭಿನಯ ಮಾಡಿ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಫಸ್ಟ್ ಟೈಮ್ ಚಿತ್ರ ನಿರ್ಮಾಣಕ್ಕೂ ಅಣಿಯಾಗಿದ್ದಾರೆ.
ಮೇಘನ ರಾಜ್ ಜೊತೆ ಐವರು ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಈ ಚಿತ್ರ ‘ಪುಟಾಣಿ ಪಂಟರ್ಸ್’ ಬಡತನ, ಶಿಕ್ಷಣ, ಸಾಧನೆ ಸುತ್ತ ಜರುಗುವ ಘಟನೆಗಳು. ವಸಂತ್ ಕುಮಾರ್ ಎಲ್. ಎನ್ ಸಂಗೀತ, ಮೀರಾ ಬಿ.ಎಸ್ ಗೀತ ರಚನೆ ಮಾಡಿದ್ದಾರೆ. ಡಿ.ಕುಮಾರ್ ಕೆರಗೊಡು ಸಂಭಾಷಣೆ ರಚಿಸಿದ್ದಾರೆ. ಹೆಸರಾಂತ ನಗೆ ನಟ ‘ಮಜಾ ಟಾಕೀಸ್’ನ ಪವನ್ ಕುಮಾರ್ ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ಪವನ್ ಕಿರು ತೆರೆಯಲ್ಲಿ ಹೆಚ್ಚು ಪ್ರಸಿದ್ದಿ, ಕನ್ನಡದ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. ಈಗ ಚುರುಕು ಪುಟಾಣಿಗಳನ್ನು ಇಟ್ಟುಕೊಂಡು ಸಿನಿಮಾ ನಿರ್ದೇಶನಕ್ಕೆ ಕಾಲಿಡಲಿದ್ದಾರೆ.
ಮಾಸ್ಟರ್ ಹೇಮಂತ್, ಮಾಸ್ಟರ್ ಹರಿ ಪ್ರೀತಮ್, ಮಾಸ್ಟರ್ ಸುಚೇತ್, ಬೇಬೀ ದೀಕ್ಷಾ, ಬೇಬೀ ಶಿವಾನಿ, ಸ್ಪರ್ಶ ರೇಖ, ಸುಂದರ್ ರಾಜ್, ಪ್ರಮಿಳಾ ಜೋಶೈ, ರಮೇಶ್ ಪಂಡಿತ್, ರಾಜೇಶ್ ನಟರಂಗ ಪಾತ್ರವರ್ಗಲ್ಲಿದ್ದಾರೆ. ಇಂದಿನ ಮುಹೂರ್ತಕ್ಕೆ ಕನ್ನಡ ಹಾಗೂ ತಮಿಳು ನಟ, ನಿರ್ದೇಶಕ, ನಿರ್ಮಾಪಕ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಶುಭ ಕೋರುವವರು.