ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದವರು ನಟಿ ಮಾಲಾಶ್ರೀ. 1990ರ ದಶಕದಲ್ಲಿ ಸಿನಿಪ್ರಿಯರ ಕನಸಿನ ರಾಣಿಯಾಗಿ ಮೆರೆದ ಮಾಲಾಶ್ರೀ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಆದ್ರೆ ಪತಿ ಸಾವಿನ ಹಿನ್ನೆಲೆ ಬೇಸರದಿಂದಿರುವ ಅವರು ಯಾವುದೇ ಅಚರಣೆಗೆ ಉತ್ಸಾಹ ತೋರಿಸಿಲ್ಲ.
ಆಗಸ್ಟ್ 10, 1973ರಲ್ಲಿ ಚೆನ್ನೈನಲ್ಲಿ ಜನಿಸಿ, ಬಾಲ್ಯದಿಂದಲೇ ಸ್ಟಾರ್ ಚೈಲ್ಡ್ ಆರ್ಟಿಸ್ಟ್ ಆಗಿ ಮಿಂಚಿದ ತೆಲುಗು ಅಮ್ಮಾಯಿ ಇವತ್ತು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷ ಪತಿ ರಾಮು, ಇಬ್ಬರು ಮಕ್ಕಳು ಹಾಗು ಸ್ನೇಹಿತರ ಜೊತೆ ಇವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಪತಿ ರಾಮು ನಿಧನದಿಂದ ನೊಂದಿದ್ದು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ.
90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಲಾಶ್ರೀ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಆಗಿದ್ದೇ ಕುತೂಹಲಕಾರಿ ಸಂಗತಿ. ದುರ್ಗಾಶ್ರೀ ಅನ್ನೋದು ಮಾಲಾಶ್ರೀಯವರ ನಿಜವಾದ ಹೆಸರು. ಈ ಹೆಸರಿನಿಂದಲೇ ದುರ್ಗಾಶ್ರೀ ಬಾಲ್ಯದಲ್ಲೇ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರೋದು ವಿಶೇಷವಾಗಿದೆ. ಮಾಲಾಶ್ರೀ ಹೇಳುವ ಹಾಗೆ, 36 ಚಿತ್ರಗಳಲ್ಲಿ 26 ಬಾರಿ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ:
ಚಿಕ್ಕ ವಯಸ್ಸಿನಲ್ಲಿ ಬಾಲನಟಿಯಾಗಿ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಮಿಂಚಿದ ದುರ್ಗಾಶ್ರೀ, ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಆಶ್ರಯದಲ್ಲಿ 1989ರಲ್ಲಿ ಬಂದ ನಂಜುಂಡಿ ಕಲ್ಯಾಣ ಸಿನಿಮಾಕ್ಕಾಗಿ ದುರ್ಗಾಶ್ರೀಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ದುರ್ಗಾಶ್ರೀ ಸೌಂದರ್ಯ ಹಾಗು ಬಾಡಿ ಲ್ಯಾಂಗ್ವೇಜ್ ನೋಡಿ ಪಾರ್ವತಮ್ಮ ರಾಜ್‍ಕುಮಾರ್ ಅವರು ದುರ್ಗಾಶ್ರೀ ಹೆಸರು ತೆಗೆದು, ಮಾಲಾಶ್ರೀ ಎಂದು ನಾಮಕರಣ ಮಾಡಿದ್ದರು. ಬಹುಶಃ ಪಾರ್ವತಮ್ಮ ರಾಜ್‍ಕುಮಾರ್ ಇಟ್ಟ ಈ ಹೆಸರಿನಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗುತ್ತಾರೆ ಅಂತಾ ಸ್ವತಃ ಮಾಲಾಶ್ರೀ ಕೂಡ ಅಂದುಕೊಂಡಿರಲಿಲ್ಲ.
ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ ಹಠಮಾರಿ ಹೆಣ್ಣು ಹುಡುಗಿಯಾಗಿ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ಅಂದ್ರೆ ಚೊಚ್ಚಲ ಚಿತ್ರದಲ್ಲೇ ಮಾಲಾಶ್ರೀ ಸೆಂಚುರಿ ಬಾರಿಸುತ್ತಾರೆ. ಅಚ್ಚರಿ ಅಂದರೆ ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟಿ ಜಯಂತಿ ಬಳಿಕ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಿದ್ದು ಇವ್ರೇ ನೋಡಿ.
ಈ ಸಿನಿಮಾ ಯಶಸ್ಸಿನಿಂದ ಮಾಲಾಶ್ರೀ ನಟಿಸಿದ ಗಜಪತಿ ಗರ್ವಭಂಗ, ಪೊಲೀಸ್ ಹೆಂಡ್ತಿ, ರಾಣಿ ಮಹಾರಾಣಿ, ಹೃದಯ ಹಾಡಿತು, ಸೋಲಿಲ್ಲದ ಸರದಾರ, ಬೆಳ್ಳಿ ಕಾಲುಂಗುರ ಸಿನಿಮಾಗಳ ಯಶಸ್ಸಿನಿಂದ ನಿರ್ಮಾಪಕರ ಪಾಲಿಗೆ ಮಾಲಾಶ್ರೀ ಅದೃಷ್ಟದ ದೇವತೆಯಾಗುತ್ತಾರೆ.
ಮಾಲಾಶ್ರೀ ಬರೀ ಗ್ಲ್ಯಾಮರ್ ನಟಿಯಾಗಿ, ಪಡ್ಡೆ ಹುಡುಗರ ಹೃದಯ ಕದಿಯಲಿಲ್ಲ. 'ಮರಣ ಮೃದಂಗ', ಎಸ್.ಪಿ ಭಾರ್ಗವಿ, ಕೊಲ್ಲೂರ ಕಾಳ, ಚಾಮುಂಡಿ, ಕಿರಣ್ ಬೇಡಿ ಅಂತಹ ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಆಕ್ಷನ್ ಕ್ವೀನ್ ಬಿರುದು ಪಡೆಯುತ್ತಾರೆ. ನಂತರ ರೆಡಿಮೇಡ್ ಗಂಡ, ಕನಸಿನ ರಾಣಿ, ಮಾಲಾಶ್ರೀ ಮಾಮಾಶ್ರೀ ಹಾಗೂ ಹಳ್ಳಿ ರಂಭೆ ಬೆಳ್ಳಿ ಬೊಂಬೆ ಚಿತ್ರಗಳಲ್ಲಿ ಕಾಮಿಡಿ ಹೀರೋಯಿನ್ ಆಗಿ ಬೆಳ್ಳಿ ತೆರೆಮೇಲೆ ರಾರಾಜಿಸಿದರು.
ಕನ್ನಡ ಚಿತ್ರರಂಗದ ಶಿವರಾಜ್ ಕುಮಾರ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ರಾಘವೇಂದ್ರ ರಾಜ್ ಕುಮಾರ್, ಶ್ರೀಧರ್, ಸುನೀಲ್, ದೇವರಾಜ್ ಹಾಗು ಶಶಿಕುಮಾರ್ ಸೇರಿದಂತೆ ಆ ಕಾಲದ ಸ್ಟಾರ್ ನಟರ ಜೊತೆ ಮಾಲಾಶ್ರೀ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇನ್ನು ಕನ್ನಡ ಅಲ್ಲದೇ ಮಾಲಾಶ್ರೀ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬೇಡಿಕೆ ನಟಿಯಾಗಿ ಮಿಂಚಿದ್ದಾರೆ.
ಮಾಲಾಶ್ರೀ ಒಂದು ದಿನದಲ್ಲಿ ಎರಡು, ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಅಂತಹ ಬ್ಯುಸಿ ಶೆಡ್ಯೂಲ್ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ 'ಶಾಂತಿ ಕ್ರಾಂತಿ' ಎಂಬ ಸಿನಿಮಾವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ, ನಷ್ಟ ಅನುಭವಿಸಿದ್ದರು. ಆ ಸಮಯದಲ್ಲಿ ರವಿಚಂದ್ರನ್ ಅವ್ರ ರಾಮಾಚಾರಿ ಸಿನಿಮಾಗೆ ಮಾಲಾಶ್ರೀಯು ಸಂಭಾವನೆ ಪಡೆಯದೇ ಅಭಿನಯಿಸಿದ್ದರಂತೆ.