ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ನಾಯಕಿ ಸಹನಾ ಆಗಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾದ ಕರಾವಳಿ ಕುವರಿ ಅದ್ವಿತಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದೇ ಹೆಚ್ಚು! ಹಾಗೇ ನೋಡಿದರೆ ಆಕೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಕೂಡ ಸಿನಿಮಾದಿಂದಲೇ.
ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಸಿನಿಮಾದಲ್ಲಿ ತನ್ನ ಅವಳಿ ತಂಗಿ ಅಶ್ವಿತಿ ಶೆಟ್ಟಿ ಜೊತೆಗೆ ಅಭಿನಯಿಸಿದ್ದ ಅದ್ವಿತಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಸಿನಿಮಾದ ನಂತರ 'ಸುಳಿ' ಸಿನಿಮಾದಲ್ಲಿ ಅಭಿನಯಿಸಿದ್ದ ಅದ್ವಿತಿ, ಪ್ರಣಯರಾಜ ಶ್ರೀನಾಥ್ ಅವರ ಮಗಳಾಗಿ ನಟಿಸಿದ್ದರು.
ಮುಂದೆ ರವಿಕಿರಣ್ ನಿರ್ದೇಶನದ 'ಗಿರಿಗಿಟ್ಲೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅವರು, ಮುಂದೆ ಕಿರುತೆರೆಗೆ ಕಾಲಿಟ್ಟಿದ್ದು ಸಹನಾ ಆಗಿ ಮೋಡಿ ಮಾಡಿದ್ದರು.
ಕಾರ್ಮೋಡ ಸರಿದು, ಫ್ಯಾನ್, ಓ ಪ್ರೇಮವೇ, ದೊಡ್ಮನೆ ಹುಡುಗ, ಐರಾವನ್ ಸಿನಿಮಾಗಳಲ್ಲಿ ನಟಿಸಿರುವ ಅದ್ವಿತಿ ಇದೀಗ ಡಾಕ್ಟರ್ ಆಗಿ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಡಾ.ವೆಂಕಟೇಶ್ ಪ್ರಸಾದ್ ನಿರ್ದೇಶನದ ಡಾ.ಅಭಿ ಸಿನಿಮಾದಲ್ಲಿ ಮೆಡಿಕಲ್ ಸ್ಟೂಡೆಂಟ್ ಆಗಿ ಮೋಡಿ ಮಾಡಲಿದ್ದಾರೆ.
ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಮಿಂಚಿದ ಅದ್ವಿತಿ ಶೆಟ್ಟಿ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಮೊದಲಿನಿಂದಲೂ ನೃತ್ಯವನ್ನು ಇಷ್ಟಪಡುತ್ತಿದ್ದ ಅದ್ವಿತಿ ನೃತ್ಯವನ್ನು ಶಾಸ್ತ್ರೋಕ್ತವಾಗಿ ಕಲಿತಿದ್ದಾರೆ.
ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅದ್ವಿತಿ, ಟಾಪ್ ಸಿಕ್ಸ್ ಸ್ಪರ್ಧಿಯಾಗಿ ಆಯ್ಕೆಯೂ ಆಗಿದ್ದರು. ಮಂಗಳೂರಿನ ಓಷನ್ ತಂಡ ಸೇರಿದ ಅದ್ವಿತಿ ಕಥಕ್ ನೃತ್ಯವನ್ನು ಕರಗತ ಮಾಡಿಕೊಂಡರು.
ಶಿವ ತಾಂಡವ, ಕೃಷ್ಣನ ಕಥೆ, ರಾಮಾಯಣ ಮೊದಲಾದ ಪೌರಾಣಿಕ ಕಥಾನಕ ಹೊಂದಿದ ನೃತ್ಯ ಪ್ರಕಾರಗಳನ್ನು ಮಾಡಿರುವ ನಟಿ, ಇಂಡಿಯಾ ಗಾಟ್ ಟ್ಯಾಲೆಂಟ್, ಈಟಿವಿ ಕನ್ನಡದ ಸೂಪರ್ ಡ್ಯಾನ್ಸ್, ತೆಲುಗು ಈ ಟಿವಿಯಲ್ಲಿ ಅಧುರ್ಸ್ ಡ್ಯಾನ್ಸ್ ಶೋ ವಿನಲ್ಲೂ ಭಾಗವಹಿಸಿದ್ದರು.
ಓದಿ: ಮಂಗಳೂರು: ಚಂಡಮಾರುತದಿಂದ ರಕ್ಷಿಸಲ್ಪಟ್ಟ ಐವರು ಆಸ್ಪತ್ರೆಗೆ ದಾಖಲು