ಬೆಂಗಳೂರು: ರಂಗಭೂಮಿ, ಸಿನಿಮಾ, ಧಾರಾವಾಹಿ, ಸಾಹಿತ್ಯ, ಪ್ರಗತಿಪರ ಚಿಂತನೆ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದ ಜಿ.ಕೆ ಗೋವಿಂದರಾವ್ ಬದುಕಿನ ಯಾನ ಮುಗಿಸಿದ್ದಾರೆ. ಹುಬ್ಬಳ್ಳಿಯ ಗೋಲ್ಡನ್ ಟೌನ್ ಬಡಾವಣೆಯಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಅವರ ಇಚ್ಛೆಯಂತೆ ಅತ್ಯಂತ ಸರಳವಾಗಿ ಅಂತ್ಯಕ್ರಿಯೆ ಸಹ ನೆರವೇರಿಸಲಾಗಿದ್ದು, ಇದಕ್ಕೂ ಮುನ್ನ ನೇತ್ರದಾನ ಮಾಡುವ ಮೂಲಕ ಕುಟುಂಬ ಸದಸ್ಯರು ಆದರ್ಶ ಮೆರೆದಿದ್ದಾರೆ. ಅಳಿಯ ಗುರುಪ್ರಸಾದ್ (ಜಿ.ಕೆ ಗೋವಿಂದರಾವ್ ಅವರ ಪುತ್ರಿ ಶ್ಯಾಮಲಾ ಅವರ ಪತಿ) ಹುಬ್ಬಳ್ಳಿಯ ಎಂಎಂ ಜೋಷಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿದ್ದು, ಗೋವಿಂದರಾವ್ ಅವರ ಇಚ್ಛೆಯಂತೆ ಎಂಎಂ ಜೋಷಿ ನೇತ್ರವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಲಾಗಿದೆ.
84 ವರ್ಷದ ಗೋವಿಂದರಾವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ತಿಂಗಳ ಹಿಂದೆ ಇವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿತ್ತು. 5 ದಿನದ ಹಿಂದೆ ಇವರ ಆರೋಗ್ಯ ಇನ್ನಷ್ಟು ಕ್ಷೀಣಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಡೆಯ ಎರಡು ದಿನ ಅರೆ ಪ್ರಜ್ಞಾವಸ್ಥೆಗೆ ತೆರಳಿದ್ದ ಅವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.
12ನೇ ವರ್ಷದಲ್ಲಿ ರಂಗಭೂಮಿ ಪ್ರವೇಶ
ಜಿಕೆಜಿ ತಮ್ಮ 12ನೇ ವರ್ಷದಲ್ಲಿಯೇ ರಂಗಭೂಮಿ ಪ್ರವೇಶ ಮಾಡುವ ಮೂಲಕ ಕಲಾವಿದರಾಗಿ ಹೊರಹೊಮ್ಮಿದರು. ‘ಮೀನಾ ಮದುವೆ’ ಎಂಬ ನಾಟಕದಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದರು. ನಂತರ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಹೋಂರೂಲ್’ ನಾಟಕದಲ್ಲಿಯೂ ನಟಿಸಿ ಗಮನ ಸೆಳೆದರು. ಹವ್ಯಾಸಿ ರಂಗಭೂಮಿ, ಧಾರವಾಹಿ, ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಕಾದಂಬರಿಕಾರರಾಗಿ ಬರಹಗಾರರಾಗಿ, ಪ್ರಗತಿಪರ ಚಿಂತಕರಾಗಿ ಗಮನ ಸೆಳೆದಿದ್ದರು. ಅತ್ಯುತ್ತಮ ನಾಡು - ನುಡಿ ಹೋರಾಟದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರಮುಖ ಚಿಂತಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಹುಟ್ಟು ಹಾಗೂ ಬೆಳವಣಿಗೆ
1937ರ ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಿ.ಎಂ ಕೃಷ್ಣಮೂರ್ತಿ ತಾಯಿ ಲಕ್ಷ್ಮೀದೇವಿ. ಪತ್ನಿಯ ಹೆಸರು ಸಹ ಲಕ್ಷ್ಮೀದೇವಿ. ಶಾಮಲಾ ಹಾಗೂ ಶಾಕುಂತಲಾ ಇಬ್ಬರು ಪುತ್ರಿಯರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ ಅವರು, ಖ್ಯಾತ ವಿಮರ್ಶಕರಾದ ರಾಮಚಂದ್ರಶರ್ಮ, ಹೆಚ್. ನರಸಿಂಹಯ್ಯ ಶಿಕ್ಷಕರಾಗಿ ಲಭಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ವ್ಯಾಸಂಗ ಮಾಡಿದ್ದಾರೆ. ಇದಾದ ಬಳಿಕ ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ, ಹಾಗೂ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇದಾದ ಬಳಿಕ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ 27 ವರ್ಷಕ್ಕೂ ಅಧಿಕ ಕಾಲ ಉಪನ್ಯಾಸಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಸಂಸ್ಕಾರ, ತುಘಲಕ್ನಲ್ಲಿ ಜಿಕೆಜಿ
ನವ್ಯಕತೆ, ಕಾವ್ಯ, ನಾಟಕಗಳು, ಹೊಸ ಕವಲು, ನಾಟಕ ರಚನೆಯಲ್ಲಿಯೂ ಸಾಕಷ್ಟು ದೊಡ್ಡ ಹೆಸರು ಮಾಡಿದ್ದ ಅವರು, ಸಮುದಾಯ ಕಲೆಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಹಲವು ಮಹತ್ವಪೂರ್ಣ ನಾಟಕಗಳು ರಂಗಭೂಮಿಗೆ ಬರಲು ಇವರು ಕಾರಣರಾಗಿದ್ದರು. ಅಂಕುರ್ ಅವರ ನಿರ್ದೇಶನದ ‘ಸಂಸ್ಕಾರ’ ನಾಟಕದಲ್ಲಿ ಕೇಂದ್ರ ಪಾತ್ರವನ್ನು ವಹಿಸಿದ್ದರು. ಗಿರೀಶ್ ಕಾರ್ನಾಡರ ಹೆಸರಾಂತ ನಾಟಕ ‘ತುಘಲಕ್’ ನ ಮೊದಲ ಪ್ರಯೋಗದಲ್ಲಿ ಅಭಿನಯಿಸಿ ನೋಡುಗರ ನೆನಪಿನಲ್ಲಿ ಉಳಿಯುವಂತೆ ನಟಿಸಿದ್ದರು.
ಸಾಕಷ್ಟು ಇಂಗ್ಲಿಷ್ ನಾಟಕಗಳನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಂಗಭೂಮಿ ಕಲಾವಿದರಾಗಿ ‘ಮಾಲ್ಗುಡಿ ಡೇಸ್’ ಆಗುವ ಪರ್ವದಲ್ಲಿ ಇವರು ನೀಡಿದ ಅಭಿನಯ ಇಂದಿಗೂ ಮನೆಮಾತಾಗಿದೆ.
ಸಿನಿ ದಾರಿ ತೋರಿಸಿದ ಪುಟ್ಟಣ್ಣ ಕಣಗಾಲ್
ಸಮಕಾಲೀನ ವಿಚಾರಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ಅದನ್ನು ಪೋಷಿಸುವ ಕಾರ್ಯ ಮಾಡಿದರು. ರಂಗ ಸಂಯೋಜನೆ, ರಂಗಚಟುವಟಿಕೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದರು. 1995ರಲ್ಲಿ ಸರ್ಕಾರ ರಾಜ್ಯ ನಾಟಕ ಅಕಾಡೆಮಿ ಫೆಲೋಶಿಪ್ ನೀಡಿ ಗೌರವಿಸಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’, ‘ಕಾಲೇಜುರಂಗ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿ ಜಿಕೆ ಗೋವಿಂದರಾವ್ರಿಗೆ ಚಿತ್ರರಂಗದಲ್ಲಿ ವೇದಿಕೆ ಕಲ್ಪಿಸಿ ಕೊಟ್ಟಿದ್ದರು.
ಇದಲ್ಲದೇ ಬಂಧನ, ಕಾನೂರು ಹೆಗ್ಗಡತಿ, ರೇ, ಗ್ರಹಣ, ಮಿಥಿಲೆಯ ಸೀತೆಯರು, ಕರ್ಪ್ಯು, ಶಾಸ್ತ್ರಿ, ನಿಶಬ್ದ, ಭೂಮಿ ತಾಯಿ ಚೊಚ್ಚಲ ಮಗ, ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದಲ್ಲದೇ ಜನಪ್ರಿಯ ಧಾರಾವಾಹಿಗಳಾದ ಮುಕ್ತ, ಮಿಂಚು, ಮತ್ತಿತರ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಒಬ್ಬ ಉತ್ತಮ ಬರಹಗಾರರಾಗಿದ್ದ ಅವರು ‘ಈಶ್ವರ ಅಲ್ಲಾ’ ಕಾದಂಬರಿ ಬರೆದಿದ್ದರು. ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ-ಪ್ರತಿಕ್ರಿಯೆ ಇವರ ಪ್ರಮುಖ ವೈಚಾರಿಕ ಬರಹಗಳಾಗಿವೆ. ಶೇಕ್ಸ್ ಸ್ಪಿಯರ್ ಎರಡು ನಾಟಕಗಳಾದ ಜೂಲಿಯಸ್ ಸೀಸರ್, ಒಥೆಲೊ ಅನುವಾದ ಕಾರ್ಯ ಕೂಡಾ ಮಾಡಿದ್ದರು.