ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಶೋ ಮತ್ತು ಕೋಟಿಗೊಬ್ಬ 3, ವಿಕ್ರಾಂತ್ ರೋಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಈ ವಾರದ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಬರುತ್ತಿಲ್ಲ.
ನಿನ್ನೆಯಷ್ಟೇ ಕಿಚ್ಚ ಸುದೀಪ್ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ, ಬಿಗ್ ಬಾಸ್ ವಾರದ ಕಾರ್ಯಕ್ರಮ ಇರಲ್ಲ ಅಂತ ಹೇಳಲಾಗಿತ್ತು. ಇದೀಗ ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ.
ಆದರೆ, ವೈದ್ಯರು ಇನ್ನೂ ಕೆಲ ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ, ಬಿಗ್ಬಾಸ್ ಕನ್ನಡ 8ನೇ ಸೀಸನ್ನ ಈ ವೀಕೆಂಡ್ನ ಎಪಿಸೋಡ್ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ಕನ್ನಡ-8ನೇ ಸೀಸನ್ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಿಗ್ಬಾಸ್ನಿಂದ ಈಗಾಗಲೇ 6 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ನಾಳೆ ಹಾಗೂ ಭಾನುವಾರ ನಡೆಯಲಿರುವ ವೀಕೆಂಡ್ ಎಪಿಸೋಡ್ನಲ್ಲಿ ಇನ್ನೊಬ್ಬರು ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದು ಖಚಿತ.
ಇದನ್ನೂ ಓದಿ: ಕಿಚ್ಚ ಸುದೀಪ್ಗೆ ಅನಾರೋಗ್ಯ: ಬಿಗ್ಬಾಸ್ ಮನೆಗೆ ವಾರಾಂತ್ಯದ ನಿರೂಪಕರಾಗಿ ಮತ್ತೊಬ್ಬರು ಎಂಟ್ರಿ!?
ಆದರೆ, ಕಿಚ್ಚ ಸುದೀಪ್ ನಡೆಸಿಕೊಡುವ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ಗಾಗಿ ಕಂಟೆಸ್ಟೆಂಟ್ಸ್ ಸೇರಿ ಅನೇಕ ಪ್ರೇಕ್ಷಕರು ಕಾಯುತ್ತಿದ್ದರು. ಇದೀಗ ಕಿಚ್ಚ ಸುದೀಪ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಈ ವಾರ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.