ಕೊರೊನಾ ಕಾರಣದಿಂದಾಗಿ ಎರಡೂವರೆ ತಿಂಗಳು ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿತ್ತು. ಅನ್ಲಾಕ್ ಬಳಿಕ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿವೆ. ಇದೀಗ ಬಹುಭಾಷೆ ನಟ ಸಂಪತ್ ರಾಜ್ ಮುಖ್ಯಭೂಮಿಕೆಯಲ್ಲಿರೋ 'ರಂಗ ಸಮುದ್ರ' ಚಿತ್ರದ ಚಿತ್ರೀಕರಣ ಸಹ ಬಹುತೇಕ ಪೂರ್ಣವಾಗಿದೆ. ಈ ಚಿತ್ರದ ಶೀರ್ಷಿಕೆ ಪೋಸ್ಟರ್ ಅನ್ನು ನಟ ಕಿಚ್ಚ ಸುದೀಪ್ ಅನಾವರಣಗೊಳಿಸಿ, ಶುಭ ಕೋರಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕರಾದ ಸೂರಿ, ಸುನೀಲ್ ಪುರಾಣಿಕ್, ಬ.ಲ. ಸುರೇಶ್, ವಿನು ಬಳಂಜ ಮುಂತಾದವರೊಡನೆ ಕಾರ್ಯನಿರ್ವಹಿಸಿರುವ ರಾಜಕುಮಾರ್ ಅಸ್ಕಿ ಈ ಚಿತ್ರದ ನಿರ್ದೇಶಕರು. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಊರೊಂದರ ಹೆಸರು ರಂಗ ಸಮುದ್ರ. ಊರಿನ ಹೆಸರೇ ಈಗ ಚಿತ್ರದ ಶೀರ್ಷಿಕೆಯಾಗಿದೆ.
20 ವರ್ಷಗಳ ಹಿಂದೆ ಈ ಊರಿನಲ್ಲಿ ನಡೆದ ಫಟನೆಯೇ ಚಿತ್ರದ ಪ್ರಮುಖ ಕಥಾವಸ್ತು. ಅಂದರೆ ಮಾನವೀಯ ಅನುಬಂಧದ ರೆಟ್ರೋ ಕಥಾನಕ ಚಿತ್ರದ ವಸ್ತು. ರಂಗಾಯಣ ರಘು ಮತ್ತು ಸಂಪತ್ ರಾಜ್ ಪ್ರಧಾನ ಪಾತ್ರದಲ್ಲಿದ್ದು, ಇದೇ ಮೊದಲಿಗೆ ಹೊಸ ಆಯಾಮದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜನಪದ ಸೊಗಡಿನ ಪಕ್ಕಾ ದೇಸಿ ಕಥೆ ರಂಗ ಸಮುದ್ರದ ಹೆಗ್ಗಳಿಕೆ.
ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ರಂಗಾಯಣ ರಘು, ಪಂಚಭಾಷಾ ತಾರೆ ಸಂಪತ್ ರಾಜ್ ಮತ್ತು ಕಾರ್ತಿಕ್, ದಿವ್ಯಾಗೌಡ, ಗುರುರಾಜ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, ಮಹೇಂದ್ರ, ಸದಾನಂದ, ಸ್ಕಂದ ತೇಜಸ್ ಮುಂತಾದವರು ರಂಗ ಸಮುದ್ರದಲ್ಲಿ ಅಭಿನಯಿಸಿದ್ದಾರೆ.
ಮೈಸೂರು, ಬಿಜಾಪುರ, ಬೆಂಗಳೂರು, ಮಹಾರಾಷ್ಟ್ರ ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಐದು ಹಾಡುಗಳಿರುವ ರಂಗಸಮುದ್ರ ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ನೀಡುತ್ತಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀಕಾಂತ್ (ಕೆಜಿಎಫ್) ಸಂಕಲನ, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ಹಾಗೂ ಧನಂಜಯ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ರಂಗಸಮುದ್ರ ಚಿತ್ರದ ವಿಭಿನ್ನ ಶೈಲಿಯ ಪೋಸ್ಟರ್ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮತ್ತೆ ಚೇಂಜ್ ಆಗಲಿದೆ ಸೆಂಚುರಿ ಸ್ಟಾರ್ ಅಭಿನಯದ 'ಶಿವಪ್ಪ' ಚಿತ್ರದ ಟೈಟಲ್!