ಕನ್ನಡದ ಮೇರು ನಟನಾಗಿ ಮಿಂಚಿ ಮರೆಯಾದ ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಷ್ಟೇ ಅಲ್ಲ, ಗಾಯಕರಾಗಿಯೂ ಖ್ಯಾತಿ ಹೊಂದಿದ್ದರು. ತಮ್ಮ ಕಂಠಸಿರಿಗೂ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಪುನೀತ್ ಅವರು ತಾವು ನಟಿಸಿದ್ದ ಚಿತ್ರದಲ್ಲಿ ಹಾಡಿದ್ದರು. ಬೆಟ್ಟದ ಹೂವು ಚಿತ್ರದಲ್ಲಿ ರಾಮು ಪಾತ್ರದಲ್ಲಿ ನಟಿಸಿದ್ದ ಅಪ್ಪು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
ಈ ಚಿತ್ರದಲ್ಲಿ 'ಬಿಸಿಲೇ ಇರಲೀ ಮಳೆಯೇ ಬರಲೀ..' ಹಾಡು ಪುನೀತ್ ಪ್ರತಿಭೆಗೆ ಸಾಕ್ಷಿಯಾಗಿತ್ತು. ನಂತರ 1982ರಲ್ಲಿ ಚಲಿಸುವ ಮೋಡಗಳು ಚಿತ್ರದಲ್ಲಿ 'ಕಾಣದಂತೆ ಮಾಯವಾದನೋ ಶಿವ..' ಹಾಡಿದ ಹಾಡು ಜನಮನ್ನಣೆ ಗಳಿಸಿತ್ತು.
95ಕ್ಕೂ ಅಧಿಕ ಹಾಡು ಹಾಡಿರುವ ಅಪ್ಪು
2002ರಲ್ಲಿ ತೆರೆಕಂಡ ಅಪ್ಪು ಸಿನಿಮಾದಲ್ಲಿ 'ತಾಲಿಬಾನ್ ಅಲ್ಲ ಅಲ್ಲ..' ಹಾಡಿನ ಮೂಲಕ ಪವರ್ ಸ್ಟಾರ್ ಮತ್ತೆ ತಮ್ಮ ಗಾಯನ ಶುರು ಮಾಡಿದರು. ಪುನೀತ್ ಕನ್ನಡದಲ್ಲಿ ಈವರೆಗೆ 95ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. 2008ರಲ್ಲಿ ತೆರೆ ಕಂಡಿದ್ದ ವಂಶಿ ಚಿತ್ರದಲ್ಲಿ ಹಾಡಿದ್ದ 'ಅಮಲು ಅಮಲು ಅಮಲು ಗೆಳತಿ ನೀನು ಸಿಗಲು..' ಹಾಗೂ 'ಜೊತೆ ಜೊತೆಯಲಿ ಪ್ರೀತಿ ಜತೆಯಲಿ..' ಹಾಡುಗಳು ಸೂಪರ್ ಹಿಟ್ ಆಗಿದ್ದವು. ಆಕಾಶ್ ಚಿತ್ರದ 'ಹೊಡಿ ಹೊಡಿ ಹೊಡಿ ಡೋಲು ಹೊಡಿ..' ಹಾಡು ಕೂಡ ಅಭಿಮಾನಿಗಳ ಮನಸೂರೆಗೊಂಡಿತ್ತು.
ಶಿವಣ್ಣ ಚಿತ್ರಕ್ಕೆ ಧ್ವನಿ ನೀಡಿದ್ದ ಪವರ್ ಸ್ಟಾರ್
2009ರಲ್ಲಿ ಬಿಡುಗಡೆಯಾದ ರಾಮ್ ಚಿತ್ರದಲ್ಲಿ ಹಾಡಿದ್ದ 'ಹೊಸ ಗಾನ ಬಜಾನ ಹಳೆ ಪ್ರೇಮ ಪುರಾಣ..', 2010ರಲ್ಲಿ ಶಿವರಾಜ್ ಕುಮಾರ್ ಅವರ ಮೈಲಾರಿ ಚಿತ್ರಕ್ಕೆ ಹಾಡಿದ 'ಮೈಲಾಪುರ ಮೈಲಾರಿ..' ಹಾಡುಗಳು ಜನಪ್ರಿಯತೆ ಗಳಿಸಿದ್ದವು. 2016ರಲ್ಲಿ ತೆರೆಕಂಡ ದೊಡ್ಮನೆ ಹುಡ್ಗ ಚಿತ್ರದಲ್ಲಿ ಹಾಡಿದ 'ಅಭಿಮಾನಿಗಳೇ ನಮ್ಮನೆ ದೇವ್ರು..' ಹಾಡು ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು.
2017ರಲ್ಲಿ ರಾಜಕುಮಾರ ಚಿತ್ರದ 'ಯಾಕಿಂಗಾಗಿದೆ..' ಹಾಡು ಕೂಡ ಸೂಪರ್ ಹಿಟ್ ಆಗಿತ್ತು. ಈ ಸಾಂಗ್ ಬರೀ ಇಂಟರ್ನೆಟ್ ನಲ್ಲೇ 9 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿರುವುದು ಅಪ್ಪು ಸಾಂಗ್‌ಗಳ ಜನಪ್ರಿಯತೆಗೆ ಸಾಕ್ಷಿ. ಕಳೆದ ವರ್ಷ 2020ರಲ್ಲಿ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಹಾಡಿದ 'ಏನ್ ಮಾಡೋದು ಸ್ವಾಮಿ..' ಹಾಡು, ಅಧ್ಯಕ್ಷ ಚಿತ್ರದ 'ಅಧ್ಯಕ್ಷ ಅಧ್ಯಕ್ಷ..' ಸಾಂಗ್, ಯುವರತ್ನ ಚಿತ್ರದ 'ಊರಿಗೊಬ್ಬ ರಾಜ ಆ ರಾಜಂಗೊಬ್ಳು ರಾಣಿ..' ಸಾಂಗ್, ರ್ಯಾಂಬೋ-2 ಚಿತ್ರದ 'ಎಲ್ಲಿ ಕಾಣ್ ಎಲ್ಲಿ ಕಾಣೆನೋ..' ಹಾಡುಗಳು ಕೂಡ ಪುನೀತ್ ಕಂಠಸಿರಿಗೆ ಸಾಕ್ಷಿಯಾಗಿವೆ.
ಅಪ್ಪು ಗಾಯನ ಹೊಗಳಿದ್ದ ಶಿವಣ್ಣ
ಇತ್ತೀಚೆಗೆ ಖ್ಯಾತ ಟಿವಿ ಶೋ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವಣ್ಣ, ಸಹೋದರ ಪುನೀತ್ ರಾಜ್ ಕುಮಾರ್ ಗಾಯನದ ಕುರಿತು ಶ್ಲಾಘಿಸಿದ್ದರು. ಕಾರ್ಯಕ್ರಮದ ತೀರ್ಪುಗಾರರಾದ ಹಂಸಲೇಖ ಅವರೊಂದಿಗೆ ಹಾಡುಗಳನ್ನು ಮಾಡುತ್ತಿದ್ದ ಕುರಿತು ಪ್ರಸ್ತಾಪವಾದಾಗ ತಮ್ಮನನ್ನು ಹೊಗಳಿದ್ದ ಶಿವಣ್ಣ ಅಪ್ಪು ಓರ್ವ ಅತ್ಯುತ್ತಮ ಗಾಯಕ ಎಂದಿದ್ದರು.
ತುಳು ಭಾಷೆ ಮತ್ತು ಉತ್ತರ ಕರ್ನಾಟಕ ಶೈಲಿಯಲ್ಲೂ ಹಾಡಿದ್ದ ರಾಜ್
2017ರಲ್ಲಿ ತುಳು ಭಾಷೆಯಲ್ಲಿ ನಿರ್ಮಿಸಿದ ಉಮಿಲ್ ಚಿತ್ರದಲ್ಲಿ 'ರಾವುಂದೋ ರಾವುಂದೋ ಬತ್ತುಂಡು ಉಮಿಲ್..' ಸಾಂಗ್ ಅನ್ನು ಪುನೀತ್ ಹಾಡಿದ್ದರು. ಹಾಗೆಯೇ 2018ರಲ್ಲಿ ನಿರ್ಮಾಣವಾಗಿದ್ದ ಮಟಾಶ್ ಹೆಸರಿನ ಚಿತ್ರದಲ್ಲಿ ಬಿಜಾಪುರ ಜನರ ಆಡುಭಾಷೆಗೆ ಹೊಂದುವಂತೆ 'ಉಡಾಳ್ರಪ್ಪೋ ಉಡಾಳ್ರು.. ಊರ್ ತುಂಬಾ ಉಡಾಳ್ರು..' ಚಜ್ಜೀ ರೊಟ್ಟಿ, ಚವಳಿಕಾಯಿ ದುಡ್ಡಿಗೆ ಏರ್ ಬದನೇಕಾಯಿ..' ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡನ್ನೂ ಹಾಡಿದ್ದರು.