ಕೊರೊನಾ ಈಗ ಯಾರಿಗೆ ಯಾವ ಸಮಯದಲ್ಲಿ ಅಟ್ಯಾಕ್ ಮಾಡುತ್ತದೋ ಹೇಳಲಾಗುತ್ತಿಲ್ಲ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಹಠಾತ್ತನೇ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದರೆ ಕೊರೊನಾ ಇರುವುದು ದೃಢವಾಗಿರುತ್ತದೆ.
ಇದೀಗ ಚಿತ್ರನಟರು ಸೇರಿದಂತೆ ಅವರ ಕುಟುಂಬದವರಿಗೂ ಕೊರೊನಾ ಕಾಟ ನೀಡುತ್ತಿದೆ. ಲವ್ಲಿಸ್ಟಾರ್ ಪ್ರೇಮ್ ಅವರ ತಾಯಿಗೆ ಕೂಡಾ ಕೊರೊನಾ ಸೋಂಕು ತಗುಲಿದೆ. ಕೆಲವು ದಿನಗಳಿಂದ ಪ್ರೇಮ್ ತಾಯಿ ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರೇಮ್ ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಕೊರೊನಾ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ. 66 ವರ್ಷದ ಪ್ರೇಮ್ ತಾಯಿ, ಮಗನ ಜೊತೆ ಕಾಮಾಕ್ಷಿಪಾಳ್ಯದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರೇಮ್, ಕೊರೊನಾ ಯಾರಿಗೂ ಬಿಟ್ಟಿಲ್ಲ. ಸೆಲಬ್ರಿಟಿಗಳು, ಬಡವರು ಎಂಬುದನ್ನು ನೋಡುವುದಿಲ್ಲ. ಅಮಿತಾಬ್ ಬಚ್ಚನ್ ಅವರಂತ ದೊಡ್ಡ ನಟರಿಗೇ ಸೋಂಕು ತಗುಲಿದೆ. ಈಗ ನಮ್ಮ ತಾಯಿಗೆ ಬಂದಿದೆ. ನಾವು ಈ ಬಗ್ಗೆ ಧೈರ್ಯದಿಂದ ಇದ್ದೇವೆ. ಪತ್ನಿ, ಮಕ್ಕಳು ಹಾಗೂ ನಾನು ಕೂಡಾ ಕೋವಿಡ್ ಟೆಸ್ಟ್ ಮಾಡಿಸಿದ್ದು ನಮಗೆಲ್ಲಾ ನೆಗೆಟಿವ್ ಬಂದಿದೆ. ಸದ್ಯಕ್ಕೆ ನನ್ನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಬರಲಿದ್ದಾರೆ ಎಂದು ಪ್ರೇಮ್ ಹೇಳಿದ್ದಾರೆ.