ಭಾಷೆ ಉಳಿಯಲಿಲ್ಲ ಎಂದರೆ ನಮ್ಮ ಸಂಸ್ಕೃತಿಯೂ ಉಳಿಯುವುದಿಲ್ಲ ಎಂದು ಕಿಶೋರ್ ಇತ್ತೀಚಿನ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
'ನನ್ನ ಪ್ರಕಾರ' ಚಿತ್ರದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ನಟ ಕಿಶೋರ್, ಭಾಷೆ ಹಾಗೂ ಡಬ್ಬಿಂಗ್ ಚಿತ್ರಗಳ ಪರಿಣಾಮವನ್ನು ವಿವರವಾಗಿ ತಿಳಿಸಿದರು. ನಾವು ಉಳಿಯಬೇಕು ಎಂದರೆ ಭಾಷೆಯು ಉಳಿಯಬೇಕು. ನಾವು ಒಂದು ಸುಸ್ಥಿರ ಜೀವನ ನಡೆಸಬೇಕು ಅಂದರೆ ನಮಗೆ ಭಾಷೆ ಪ್ರಮುಖವಾಗಿದೆ. ನಾವು ಹೇಗೆ ಬದುಕಬೇಕು ಎಂಬುದನ್ನು ಭಾಷೆಯ ಮುಖಾಂತರ ತಿಳಿಸಬೇಕಾಗುತ್ತದೆ ಎಂದರು.
ಸದ್ಯ ಬೆಂಗಳೂರು ನಗರದಲ್ಲಿ ಹೊರಗಡೆಯಿಂದ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ದುರಂತ ಅಂದರೆ ಬೆಂಗಳೂರಿನಲ್ಲಿ ಕನ್ನಡ ಗೊತ್ತಿಲ್ಲದಿದ್ದರೂ ಬದುಕಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬೆಂಗಳೂರಿನಲ್ಲಿ ನಮ್ಮ ಸಂಸ್ಕೃತಿ ಏನು ಉಳಿದುಕೊಂಡಿಲ್ಲ. ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿ ಉಳಿದಿಲ್ಲ. ಈಗ ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಕನ್ನಡ ಚಿತ್ರಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಏಕೆಂದರೆ ಸಿನಿಮಾ ಎಂಬ ಮಾಧ್ಯಮ ತುಂಬಾ ಪ್ರಬಲವಾದದ್ದು. ಇದರಿಂದ ನಮ್ಮ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ ಎಂದರು .
ನಮ್ಮ ಸಿನಿಮಾಗಳಲ್ಲಿ ಕನ್ನಡತನವನ್ನು ಸಹ ಹೆಚ್ಚಿಸಬೇಕಾಗಿದೆ. ನಮ್ಮ ಭಾಷೆ ಉಳಿದರೆ ಮಾತ್ರ ಒಂದು ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಇಲ್ಲಿ ನಮ್ಮ ಅಳಿವು - ಉಳಿವಿನ ಪ್ರಶ್ನೆ ಎದುರಾಗಿದೆ. ಎಂದು ನಟ ಕಿಶೋರ್ ಬೆಂಗಳೂರಿನಲ್ಲಿ ಕನ್ನಡ ನಶಿಸುತ್ತಿರುವುದುರ ಬಗ್ಗೆ ಕಳವಳ ವ್ಯಕ್ತಪಡಿಸಿದರು.