'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಜೆಕೆ ಆಗಿ ಖ್ಯಾತರಾದ ನಟ ಜಯರಾಂ ಕಾರ್ತಿಕ್, ಇಂದಿಗೂ ಜನರಿಗೆ ಸೂಪರ್ ಸ್ಟಾರ್ ಜೆಕೆ ಎಂದೇ ಪರಿಚಿತ. ಧಾರಾವಾಹಿಯಲ್ಲಿ ತಮ್ಮ ಪತ್ನಿ ಪಾತ್ರಧಾರಿಗೆ ಹೆಂಡ್ತಿ.. ಹೆಂಡ್ತಿ ಎಂದು ಕರೆಯುತ್ತಿದ್ದದ್ದು ಆಗಿನ ಸಮಯದಲ್ಲಿ ಒಂದು ಟ್ರೆಂಡ್ ಆಗಿತ್ತು ಎನ್ನಬಹುದು.
ಕೆಂಪೇಗೌಡ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಕೂಡಾ ಕಾಲಿಟ್ಟ ಜಯರಾಂ ಕಾರ್ತಿಕ್, ಮುಂದೆ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು. ಅಲ್ಲಿಂದ ಹೊರ ಬಂದ ಮೇಲೆ 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಜೆಕೆಗೆ ಸೈಮಾ ಉತ್ತಮ ಪೋಷಕ ನಟ ಪ್ರಶಸ್ತಿ ಕೂಡಾ ದೊರಕಿತ್ತು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್, ಬೆಸ್ಟ್ ಏಷ್ಯನ್ ಆ್ಯಕ್ಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನೆದರ್ಲೆಂಡ್ನಲ್ಲಿ ನಡೆಯುವ ನ್ಯೂ ವಿಷನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಉತ್ತಮ ಏಷ್ಯನ್ ನಟ, ಬೆಸ್ಟ್ ಅಮೆರಿಕನ್ ನಟ, ಬೆಸ್ಟ್ ಆಫ್ರಿಕನ್ ನಟ, ಬೆಸ್ಟ್ ಡಚ್ ನಟ ಎಂದು ನಾನಾ ರೀತಿಯ ಪ್ರಶಸ್ತಿ ನೀಡಲಾಗುತ್ತದೆ. ನಟರೊಂದಿಗೆ ತಂತ್ರಜ್ಞರು, ಕಿರುಚಿತ್ರ ಮುಂತಾದ ವಿಭಾಗಗಳಲ್ಲೂ ಕೂಡಾ ಈ ಪ್ರಶಸ್ತಿ ನೀಡಲಾಗುತ್ತಿದೆ. 'ಪುಟ 109’ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ನಟನೆಗಾಗಿ ನೆದರ್ಲೆಂಡ್ನಲ್ಲಿ ನಡೆದ NVIIF ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬೆಸ್ಟ್ ಏಷ್ಯನ್ ಆ್ಯಕ್ಟರ್ ಅವಾರ್ಡ್ ದ್ವಿತೀಯ ಸ್ಥಾನವನ್ನು ಜೆಕೆ ಪಡೆದುಕೊಂಡಿದ್ದಾರೆ. ಕನ್ನಡದ ನಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಕನ್ನಡಿಗರಿಗೆ ಸಂದ ಗೌರವವಾಗಿದೆ.