ಈ ಮೊದಲು ಮಾರ್ಚ್ 17 ಬಂತೆದರೆ ಸಾಕು ಕರ್ನಾಟಕ, ಕನ್ನಡ ಚಿತ್ರರಂಗ, ಚಿತ್ರರಂಗದ ದೊಡ್ಮನೆಯಲ್ಲಿ ಹಬ್ಬದ ಸಂಭ್ರಮ ಇರುತ್ತಿತ್ತು. ಕನ್ನಡ ಚಿತ್ರರಂಗದ ರಾಜರತ್ನವಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟಿದ ದಿನ ಮಾರ್ಚ್ 17ಅನ್ನು ಎಲ್ಲರೂ ಬಹು ಸಂಭ್ರಮದಿಂದ ಆಚರಿಸುತ್ತಿದ್ದರು. ಸದಾಶಿವನಗರದ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಜನಸಾಗರವೇ ಹರಿದು ಬರುತ್ತಿತ್ತು. ಆದರೆ ಇನ್ನು ಮುಂದೆ ಆ ಸಂಭ್ರಮವಿರುವುದಿಲ್ಲ. ಅಪ್ಪು ಇಲ್ಲ ಎನ್ನುವ ಕಹಿಸತ್ಯವನ್ನು ಬಹಳ ನೋವಿನಿಂದ ಒಪ್ಪಿಕೊಂಡಿದ್ದೇವೆ.
ಇನ್ನು ಮಾರ್ಚ್ 17ರಂದು ನಟ ಜಗ್ಗೇಶ್ ಅವರ ಹುಟ್ಟು ಹಬ್ಬ ಕೂಡ ಹೌದು. ಪ್ರತಿ ವರ್ಷ ನಟ ಜಗ್ಗೇಶ್ ಅವರಿಗೆ ತಪ್ಪದೇ ಕರೆ ಮಾಡಿ ಪುನೀತ್ ರಾಜ್‌ಕುಮಾರ್ ವಿಶ್ ಮಾಡುತ್ತಿದ್ದರು. ಆದರೆ, ಈ ವರ್ಷ ಅವರಿಲ್ಲದ ನೋವು ಜಗ್ಗೇಶ್ ಅವರಿಗೂ ಬಹುವಾಗಿ ಕಾಡುತ್ತಿದೆ. ಹೀಗಾಗಿ ಮಾರ್ಚ್ 17ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ಜಗ್ಗೇಶ್ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಪುನೀತ್ ಟೈಟಲ್ ಸಾಂಗ್ ಹಾಡಿದ 'ಹರೀಶ ವಯಸ್ಸು 36' ಚಿತ್ರ ನಾಡಿದ್ದು ತೆರೆಗೆ
ಈ ಬಾರಿ ನನ್ನ 59ನೇ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ. ಅದಕ್ಕೆ ಮನಸ್ಸು ಇಲ್ಲ. ಪ್ರತಿ ವರ್ಷ ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಪರ್ಸನಲ್ ಆಗಿ ಕರೆ ಮಾಡಿ ಅಣ್ಣ ಹ್ಯಾಪಿ ಬರ್ತ್‌ಡೇ ಎಂದು ಹೇಳುತ್ತಿದ್ದರು. ಆದರೆ, ಆ ವಿಶಸ್ ಬರದಂತಾಯಿತು ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೆ ತೆಗೆಸಿಕೊಂಡ ಕೊನೆಯ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.