ಕೊಳ್ಳೇಗಾಲ: ಪರಿಸರಕ್ಕೆ ಮಹತ್ವ ನೀಡದೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಉತ್ತಮ ಪರಿಸರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅತಿಥಿ ಗೃಹಕ್ಕೆ ಭೇಟಿನೀಡಿದ್ದ ಅವರು, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಕಾಡನ್ನು ನಾಶ ಮಾಡುವ ಬದಲು ಕಾಡನ್ನು ಉಳಿಸಿ ವನ್ಯ ಜೀವಿಗಳನ್ನು ಕಾಪಾಡಬೇಕು.
ಮರಗಿಡಗಳನ್ನು ಬೆಳೆಸಿ ಪೋಷಣೆ ಮಾಡುವುದರಿಂದ ಅವು ನಮಗೆ ಅಮೂಲ್ಯವಾದ ಪರಿಸರವನ್ನು ನೀಡುತ್ತವೆ. ನಿರ್ಲಕ್ಷ್ಯ ವಹಿಸಿದರೆ ಪರಿಸರ ನಾಶವಾಗಿ ಉತ್ತಮ ಗಾಳಿಗಾಗಿ ಪ್ರತಿಯೊಬ್ಬರು ದುಡ್ಡು ಕೊಟ್ಟುಕೊಂಡು ಕೊಳ್ಳಬೇಕಾಗುತ್ತದೆ.
ಪರಿಸರ ಕಾಪಾಡಿದರೆ ಅದು ನಮ್ಮನ್ನು ಮುಂದಿನ ಪೀಳಿಗೆಯನ್ನು ಸಲಹುತ್ತದೆ. ಎಲ್ಲರಿಗೂ ಪರಿಸರ ಬೇಕು. ಅದಕ್ಕಾಗಿ ನಾವು ಹೆಚ್ಚಿನ ಮಹತ್ವ ನೀಡಬೇಕು. ಪ್ರಾಣಿ ಪಕ್ಷಿಗಳ ಉಳಿವೂ, ಆರೋಗ್ಯ ಅಭಿವೃದ್ಧಿ, ರೈತರು ಉತ್ತಮ ಬೆಳೆಯಲು ಅವಕಾಶ ಆಗಬೇಕಾದರೆ ಪ್ರತಿಯೊಬ್ಬರು ಪರಿಸರವನ್ನು ಪ್ರೀತಿಸ ಬೇಕು ಎಂದಿದ್ದಾರೆ.