ಅದ್ಧೂರಿ ಮೇಕಿಂಗ್ ಹಾಗೂ ವಿಭಿನ್ನ ಕಥೆಗಳನಿಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಇವುಗಳ ನಡುವೆ ಉತ್ತಮ ಸಂದೇಶ ಸಾರುವ ಕಿರುಚಿತ್ರಗಳು ಕೂಡ ಗಮನ ಸೆಳೆಯುತ್ತಿವೆ. ಇದೇ ಸಾಲಿಗೆ ಇ ಕ್ಷಣ ಕಿರುಚಿತ್ರ ಸೇರುತ್ತದೆ.
'ಇ ಕ್ಷಣ' ಕಿರುಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಸಿನಿಮಾವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅನಾವರಣ ಮಾಡಿದ್ದರು. ಕಿರುಚಿತ್ರದಲ್ಲಿ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿದ್ದಾರೆ. ಹಿರಿಯ ನಟ ಕೆ.ಎಸ್.ಶ್ರೀಧರ್ ಮತ್ತು ಡಾ.ಸೀತಾಕೋಟೆ ನಟಿಸಿದ್ದಾರೆ.

ಚಿಂತನಶೀಲ ವಿಷಯಗಳನ್ನು ಮನರಂಜನೆಯ ಮೂಲಕ ಬೆಳಕಿಗೆ ತರುವ ಉದ್ದೇಶದಿಂದ ಪ್ರಾರಂಭವಾದ ಸುಸ್ಮಿತಾ ಸಮೀರ್ ಅವರ ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆ ಕಿರುಚಿತ್ರವನ್ನು ನಿರ್ಮಿಸಿದೆ.
ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಕಥೆ ಹೆಣೆಯಲಾಗಿದೆ.
- " class="align-text-top noRightClick twitterSection" data="">
ಈ ಸೂಕ್ಷ್ಮ ಕಥಾ ವಿಷಯವನ್ನು ಈ ಹಿಂದೆ ಕನ್ನಡ ಚಲನಚಿತ್ರಗಳಲ್ಲಿ ಸಂಭಾಷಣೆಗಾರರಾಗಿ ಕೆಲಸ ಮಾಡಿದ ಪ್ರಸನ್ನ ವಿ.ಎಂ ಬರೆದು ನಿರ್ದೇಶಿಸಿದ್ದಾರೆ.
ಈ ಕಿರುಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕ ಮಹೇಂದರ್ ಸಿಂಹ ಕ್ಯಾಮೆರಾ ವರ್ಕ್ ಮಾಡಿದ್ದು, ಸಂಕಲನಕಾರ ಶ್ರೀಕಾಂತ್ ಎಸ್.ಹೆಚ್ ಮತ್ತು ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಜೊತೆಯಾಗಿ ಚಿಕ್ಕಮಗಳೂರಿನ ಜಯಂತಿ ಕಾಫಿ ಈ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ.

ಸಮಾಜ ನಿರ್ಮಿತ ಅನೇಕ ನಿಯಮಗಳು ಮತ್ತು ಏಕತಾನತೆಗಳಲ್ಲಿ ಒಂದನ್ನು ಸೂಕ್ಷ್ಮವಾಗಿ ಚರ್ಚಿಸುವ ಉದ್ದೇಶವನ್ನು ಈ ಕಿರುಚಿತ್ರ ಹೊಂದಿದೆ. ಮನೆಯಲ್ಲಿ ದಿನನಿತ್ಯದ ಒಂದು ಕಪ್ ಕಾಫಿಗಾಗಿ ನಡೆವ ಸಣ್ಣ ವಾದವು ಕೆಲವು ಸೂಕ್ಷ್ಮ ಆಲೋಚನೆಗಳ ವಿನಿಮಯವನ್ನು ಮಾಡಿಕೊಳ್ಳಲು ಮುಂದಾಗುವ ಪ್ರಯತ್ನ ಈ ಕಿರುಚಿತ್ರ ಮಾಡಿದೆ.