ಕಾಡುಗುಡಿ ಸಮೀಪದ ಶೀಗೆಹಳ್ಳಿ ಬಳಿಯ ಕಿನೋ ಸಿನಿಮಾಸ್ ಥಿಯೇಟರ್ಗೆ ತಮ್ಮ ತಂಡದೊಂದಿಗೆ ಆಗಮಿಸಿದ ನಟ ದುನಿಯಾ ವಿಜಯ್, ಇತ್ತೀಚೆಗೆ ಬಿಡುಗಡೆಯಾದ ತಮ್ಮ 'ಸಲಗ' ಸಿನಿಮಾವನ್ನು ಪ್ರೇಕ್ಷಕರೊಂದಿಗೆ ನೋಡಿ ಆನಂದಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್ ಥಿಯೇಟರ್ ಕಿನೋ ಸಿನಿಮಾಸ್ ಥಿಯೇಟರ್ ಒಂದು ದಿನಕ್ಕೆ 10 ಬಾರಿ ಕನ್ನಡ ಸಿನಿಮಾವನ್ನು ಹೌಸ್ ಫುಲ್ ಶೋಗಳಲ್ಲಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಮೊಟ್ಟಮೊದಲ ಬಾರಿಗೆ ಅರ್ಲಿ ಮಾರ್ನಿಂಗ್ ಶೋಗಳ ಪ್ರದರ್ಶನವನ್ನೂ ನೀಡುತ್ತಿದ್ದಾರೆ.
ಚಿತ್ರಮಂದಿರಕ್ಕೆ ಬಂದ ಚಿತ್ರತಂಡಕ್ಕೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಇದೇ ವೇಳೆ, ನೆಚ್ಚಿನ ನಟನೊಂದಿಗೆ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದರು.
'ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅಭಿಮಾನಿಗಳಿಗೆ ನಾನು ಚಿರರುಣಿ. ಪ್ರೇಕ್ಷಕರು ಕಲಾವಿದನ ಶ್ರಮವನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಸಿನಿಮಾಗಳನ್ನು ಥಿಯೇಟರ್ನಲ್ಲಿ ಬಂದು ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕು' ಎಂದು ನಟ ದುನಿಯಾ ವಿಜಯ್ ಹೇಳಿದರು.
'ಸಿನಿಮಾ ಮಾಡುವ ಸಮಯದಲ್ಲಿ ಕಲಾವಿದನ ಶ್ರಮ, ಸಿನಿಮಾಕ್ಕೆ ಬಂಡವಾಳ ಹೂಡುವ ನಿರ್ಮಾಪಕರು ಮುಖ್ಯ. ಕೋವಿಡ್ ಸಂದರ್ಭದಲ್ಲಿ ಕಲಾವಿದರು ಕೆಲಸವಿಲ್ಲದೆ ತೊಂದರೆ ಅನುಭವಿಸಿದ್ದಾರೆ. ಈಗ ಸಿನಿಮಾ ಕ್ಷೇತ್ರ ಚೇತರಿಕೆ ಕಾಣುತ್ತಿದೆ' ಎಂದರು.
ಇದನ್ನೂ ಓದಿ: ಪವನ್ ಒಡೆಯರ್ ನಿರ್ಮಾಣದ 'ಡೊಳ್ಳು' ಸಿನಿಮಾಗೆ ಪ್ರಶಸ್ತಿ ಗರಿ
'ನಮ್ಮ ಮನೆಗಳಲ್ಲಿ ದಿನನಿತ್ಯ ಮಾತನಾಡುವ ಆಡುಭಾಷೆಯನ್ನೇ ಸಿನಿಮಾದಲ್ಲಿ ಬಳಸಲಾಗಿದೆ. ಸಲಗ ಸಿನಿಮಾ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆ ಆಧಾರಿತವಾಗಿದೆ. ಕುಟುಂಬಸಮೇತ ನೋಡುವ ಸಿನಿಮಾ ಇದಾಗಿದೆ' ಎಂದು ವಿಜಯ್ ಹೇಳಿದರು.