ಶ್ರೀಮಂತರ ಮನೆಯಲ್ಲಿ ಚಿಕ್ಕ ವಸ್ತು ಕಳ್ಳತನ ಆದ್ರೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಾರೆ. ಆದರೆ ಅದೇ ಬಡವರ ಮೇಲೆ ಹಲ್ಲೆ ಅಥವಾ ಅವರ ವಸ್ತುಗಳು ನಾಶವಾದಲ್ಲಿ ಯಾರೂ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂದು ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಚೇತನ್ ಕೆ.ಜಿ. ಹಳ್ಳಿ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಲಿಂಗರಾಜಪುರದ ಕಮ್ಮನಹಳ್ಳಿ ಬಳಿ ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದ ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಗುಡಿಸಲು ಸುಟ್ಟು ಭಸ್ಮವಾಗಿವೆ. ಈ ಸ್ಥಳಕ್ಕೆ ತೆರಳಿದ್ದ ಚೇತನ್ ವಲಸೆ ಕಾರ್ಮಿಕರ ಕಷ್ಟಗಳನ್ನು ಆಲಿಸಿದರು. ಅಲ್ಲದೆ ವಲಸೆ ಕಾರ್ಮಿಕರಿಗೆ 3 ಟನ್ ದಿನಸಿ ಕಿಟ್ ವಿತರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಕಾರ್ಮಿಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗುಡುಗಿದರು. ಅಲ್ಲದೆ ಘಟನೆ ಹಿಂದಿರುವ ಕಾಣದ ಕೈಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. 20 ವರ್ಷಗಳಿಂದ ವಾಸ ಮಾಡುತ್ತಿರುವ ಈ ಕೂಲಿ ಕಾರ್ಮಿಕರು ಕೊರೊನಾ ಭೀತಿಯಲ್ಲಿ ಊರಿಗೆ ತೆರಳಿದಾಗ ಅವರ ಗುಡಿಸಲುಗಳನ್ನು ಧ್ವಂಸ ಮಾಡಲಾಗಿದೆ. ಮೊದಲೇ ಇವರೆಲ್ಲಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಂತದ್ದರಲ್ಲಿ ಈ ದುಷ್ಕೃತ್ಯ ಮಾಡಿರುವುದು ಸರಿಯಲ್ಲ. ಬಡವರಿಗೆ ಈ ರೀತಿ ತೊಂದರೆ ಕೊಟ್ಟರೆ ಅವರು ಬದುಕುವುದಾದರೂ ಹೇಗೆ ಎಂದು ಚೇತನ್ ಪ್ರಶ್ನಿಸಿದರು.
ಕೆಲವರು ಈ ಭೂಮಿಯನ್ನು ಕಬಳಿಸುವ ಉದ್ಧೇಶದಿಂದ ಇಂತ ಕೆಲಸಕ್ಕೆ ಕೈ ಹಾಕಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದವರು ಈ ಜಾಗವನ್ನು ಕಬಳಿಸುವ ಸಲುವಾಗಿ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ರಾಜಕಾರಣಿಗಳು ಕೂಡಾ ಈ ಬಡವರ ನೆರವಿಗೆ ಬರದೆ ನಿರ್ಲಕ್ಷ್ಯ ತೋರಿದ್ದಾರೆ. ಬಡವರ ಪರ ನ್ಯಾಯ ಇಲ್ಲ ಎಂದು ಚೇತನ್ ಆಕ್ರೋಶ ಹೊರಹಾಕಿದರು. ಅಲ್ಲದೆ ಸೂರು ಕಳೆದುಕೊಂಡ ಬಡವರಿಗೆ ಮತ್ತೆ ಮನೆ ನಿರ್ಮಿಸಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಲ್ಲದೆ ಬಡವರಿಗೆ ನ್ಯಾಯ ದೊರೆಯುವವರೆಗೂ ನಾವು ಹೋರಾಡುತ್ತೇವೆ ಎಂದು ಹೇಳಿದ್ದಾರೆ.