ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಮಧುಕರ್ ಪಾತ್ರಧಾರಿ ಅಭಿಲಾಷ್ ತಮ್ಮ ಬಣ್ಣದ ಬದುಕಿನ ಜರ್ನಿ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಮಗಳು ಜಾನಕಿ ನನ್ನ ರಂಗ ತರಬೇತಿಯ ಶಾಲೆ ಎಂದು ಹೇಳಿಕೊಳ್ಳುವ ಅಭಿಲಾಷ್, ಮೂಲತಃ ರಂಗಭೂಮಿ ಕಲಾವಿದ. ಪದವಿ ವ್ಯಾಸಂಗ ಮಾಡಬೇಕು ಅಂದುಕೊಂಡಿದ್ದ ಇವರನ್ನು ದೂರದ ರಂಗಭೂಮಿ ಕೈ ಬೀಸಿ ಕರೆಯಿತು. ಅದ್ಯಾವಾಗ ಅಭಿಲಾಷ್ಗೆ ರಂಗದ ಕಡೆ ಆಸಕ್ತಿ ಮೂಡಿತೋ, ದಾವಣಗೆರೆಯ ಅನ್ವೇಷಕರು ಎಂಬ ತಂಡಕ್ಕೆ ಸೇರಿದರು. ಅಲ್ಲಿ ಕೃಷ್ಣೇಗೌಡರ 'ಆನೆ', ಬೆಳಗೆರೆ ಕೃಷ್ಣ ಶಾಸ್ತ್ರಿಗಳ 'ಹಳ್ಳಿ ಚಿತ್ರ' ಮುಂತಾದ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ದಾವಣಗೆರೆಯ ರಂಗ ತಂಡ ಸೇರಿ ಪಳಗುವ ಮೊದಲೇ ಕೃಷ್ಣ ಕುಮಾರ್ ಯಾದವ್ ಅವರ ಮಧ್ಯಮ ವ್ಯಾಯಯೋಗ ನಾಟಕದಲ್ಲಿ ಅಭಿನಯಿಸಿದ್ದರು. ಕೃಷ್ಣಕುಮಾರ್ ಯಾದವ್ ಅವರೇ ನನ್ನ ಮೊದಲ ನಟನಾ ಗುರು ಎಂದು ಹೇಳುವ ಅಭಿಲಾಷ್, ರೋಮಿಯೋ ಜ್ಯೂಲಿಯೆಟ್ ನಾಟಕದಲ್ಲಿಯೂ ನಟಿಸಿದ್ದಾರೆ.
ಮುಂದೆ ದಾವಣಗೆರೆಯ ಅನ್ವೇಷಕರು ತಂಡದಲ್ಲಿ ಸಕ್ರಿಯವಾಗಿ ತೊಡಗಿದ ಇವರು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರರ ಸಿರಿ ಸಂಪಿಗೆ ನಾಟಕದಲ್ಲಿ ರಾಜಕುಮಾರನಾಗಿ ಅಭಿನಯಿಸಿದರು. ಸದ್ಯ ಮಗಳು ಜಾನಕಿ ಧಾರಾವಾಹಿಯ ಮಧುಕರ್ ಆಗಿ ಕಿರುತೆರೆ ಪಯಣ ಆರಂಭಿಸಿರುವ ಅಭಿಲಾಷ್ ಮೊದಲ ಧಾರಾವಾಹಿಯಲ್ಲೇ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಮನ ಸೆಳೆದಿರುವ ಇವರು ಇಂದು ಕಿರುತೆರೆ ವೀಕ್ಷಕರ ಪಾಲಿಗೆ ಮಧುಕರ್.