ವಿಜಯವಾಡ : ಚುನಾವಣೆ ಆಯೋಗದ ಆದೇಶ ಮೀರಿ 'ಲಕ್ಷ್ಮೀ ಎನ್ಟಿಆರ್' ಚಿತ್ರ ಪ್ರದರ್ಶನ ಮಾಡಿರುವ ಮೂರು ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ.
ರಾಜ್ಯದಲ್ಲಿ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಲಕ್ಷ್ಮೀ ಎನ್ಟಿಆರ್' ಸಿನಿಮಾ ಬಿಡುಗಡೆ ಮೇಲೆ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕುರಿತು ಆಕ್ಷೇಪಾರ್ಹ ಅಂಶಗಳಿವೆ ಎಂದು ಆರೋಪಿಸಿದ್ದ ರಾಜಕೀಯ ಪಕ್ಷಗಳು ಚುನಾವಣಾ ಕಮಿಷನ್ಗೆ ದೂರು ನೀಡಿದ್ದವು. ಅದರಂತೆ ಚಿತ್ರ ಬಿಡುಗಡೆ ಮಾಡದಂತೆ ನಿರ್ಮಾಪಕರಿಗೆ ಏಪ್ರಿಲ್ 10 ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಮುಂದಿನ ಆದೇಶ ಪ್ರಕಟಿಸುವ ವರೆಗೆ ಚಿತ್ರ ರಿಲೀಸ್ ಮಾಡದಂತೆ ಸೂಚಿಸಿತ್ತು. ಆದರೆ, ಇದನ್ನು ಉಲ್ಲಂಘಿಸಿದ ಮೂರು ಚಿತ್ರಮಂದಿರಗಳು ಮೇ.1 ರಂದು 'ಲಕ್ಷ್ಮೀ ಎನ್ಟಿಆರ್' ರಿಲೀಸ್ ಮಾಡಿದ್ದವು.
ಪೊರಮ್ಮಿಲ್ನ ವೆಂಕಟೇಶ್ವರ್, ರೈಲ್ವೆ ಕೊಡುರಿನ ಎಎಸ್ ಥಿಯೇಟರ್ ಹಾಗೂ ಕಡಪಾ ಸಿಟಿಯ ರಾಜಾ ಚಿತ್ರಮಂದಿರಗಳು ಇದೇ ಶುಕ್ರವಾರ ಚಿತ್ರ ಬಿಡುಗಡೆ ಮಾಡಿದ್ದವು. ಇದರಿಂದ ಕೆಂಡಾಮಂಡಲರಾದ ಮುಖ್ಯ ಚುನಾವಣಾ ಅಧಿಕಾರಿ, ಚಿತ್ರಮಂದಿರಗಳನ್ನು ಮುಟ್ಟುಗೋಲು ಹಾಕಿ, ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಅದರಂತೆ ಈ ಮೂರು ಥಿಯೇಟರ್ಗಳಿಗೆ ಬೀಗ ಹಾಕಿದೆ ಎಂದು ತಿಳಿದು ಬಂದಿದೆ.
ಇನ್ನು ಈಗಾಗಲೇ ತೆಲಂಗಾಣದಲ್ಲಿ ರಿಲೀಸ್ ಆಗಿರುವ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ ಆಂಧ್ರದಲ್ಲಿಯೂ ಚಿತ್ರ ರಿಲೀಸ್ ಮಾಡಲು ಆರ್ಜಿವಿ ಪ್ರಯತ್ನ ನಡೆಸಿದ್ದರು. ಇವರ ಪ್ರಯತ್ನಕ್ಕೆ ಚುನಾವಣೆ ಆಯೋಗ ತಡೆಯೊಡ್ಡಿದೆ.