ಖಾಸಗಿ ಕಾರ್ಯಕ್ರಮದ ರಿಯಾಲಿಟಿ ಶೋ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುನೀತ್ ರಾಜ್ಕುಮಾರ್ 'ಕವಲುದಾರಿ' ಗೆಲುವಿಗೆ ನಮ್ಮ ತಂಡದ ಹೇಮಂತ್ ರಾವ್, ಚರಣ್ ರಾಜ್, ರಿಶಿ, ಅನಂತ್ನಾಗ್ ಸೇರಿ ಪ್ರತಿಯೊಬ್ಬರೂ ಕಾರಣ ಎಂದು ಧನ್ಯವಾದ ಅರ್ಪಿಸಿದರು. ಈ ಸಿನಿಮಾ ಮೂರು ಭಾಷೆಗಳಲ್ಲಿ ರೀಮೇಕ್ ಆಗಲಿದೆ. ಈಗಾಗಲೇ ರೀಮೇಕ್ ಹಕ್ಕು ಕೂಡಾ ಮಾರಾಟವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪಿಆರ್ಕೆ ಸಂಸ್ಥೆಯಿಂದ ಚಿತ್ರ ವಿತರಣೆ ಕೂಡಾ ಮಾಡುವ ಯೋಚನೆ ಇದೆ ಎಂದು ಪುನೀತ್ ಹೇಳಿದರು.
ಇನ್ನು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಿಆರ್ಕೆ ಸಂಸ್ಥೆ ಮುಂದೆ ನಿಂತಿದೆ. ನಿಮ್ಮ ಬಳಿ ಒಳ್ಳೆಯ ಕಥೆ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಪತ್ನಿ ಅಶ್ವಿನಿ ಹಾಗೂ ಇತರರು ಕಥೆ ಕೇಳಿ ಅದು ಇಷ್ಟವಾದಲ್ಲಿ ನನಗೆ ತಿಳಿಸುತ್ತಾರೆ, ನಂತರ ನಮ್ಮ ನಿರ್ಧಾರವನ್ನು ನಿಮಗೆ ತಿಳಿಸಲಾಗುವುದು. ಸಿನಿಮಾ ಮಾಡಲು ಬಯಸುವವರು ಒಂದು ವಿಡಿಯೋ ಮಾಡಿ ತಮ್ಮ ಐಡಿಯಾವನ್ನು ನಮಗೆ ನೀಡಬಹುದು. ಒಳ್ಳೆಯ ಕಥೆಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ.
‘ಲಾ‘ , ಮಾಯಾಬಜಾರ್, ಪನ್ನಗಾಭರಣ ನಿರ್ದೇಶನದ ಹೆಸರಿಡದ ಒಂದು ಸಿನಿಮಾ ಈ ವರ್ಷವೇ ಬಿಡುಗಡೆಯಾಗಲಿದೆ. ಈ ವರ್ಷ ನಮ್ಮ ಸಂಸ್ಥೆಯಿಂದ ಒಟ್ಟು 4 ಸಿನಿಮಾಗಳು ಬಿಡುಗಡೆ ಆದಂತೆ. ‘ಯುವರತ್ನ‘ ಮುಗಿದ ಕೂಡಲೇ ನಮ್ಮ ಸಂಸ್ಥೆಯಿಂದ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಲಾಗುವುದು ಎಂದು ಪುನೀತ್ ಹೇಳಿದ್ದಾರೆ.