ಲಾಸ್ ಏಂಜಲೀಸ್( ಅಮೆರಿಕ): ಪ್ರಸಕ್ತ ಸಾಲಿನ ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳು ಘೋಷಣೆಯಾಗಿದ್ದು, 20ನೇ ವಯಸ್ಸಿನ ಯುವ ಗಾಯಕಿ ಬಿಲ್ಲಿ ಎಲಿಷ್ ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 'ನೋ ಟೈಮ್ ಟು ಡೈ' ಚಿತ್ರದ ಗೀತೆಗಾಗಿ 'ಬೆಸ್ಟ್ ಓರಿಜಿನಲ್ ಸಾಂಗ್' ಪ್ರಶಸ್ತಿಯನ್ನು ಬಿಲ್ಲಿ ಮತ್ತು ಆಕೆಯ ಸಹೋದರ ಫಿನ್ನಿಯಾಸ್ ಒ'ಕೋನ್ನೆಲ್ ಪಡೆದುಕೊಂಡರು.
ಗ್ರ್ಯಾಮಿ ಪ್ರಶಸ್ತಿ ವಿಜೇತೆಯಾಗಿರುವ ಬಿಲ್ಲಿ ಎಲಿಷ್ ಈಗ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿಲ್ಲಿ ಎಲಿಷ್, ಆಸ್ಕರ್ ಬಂದಿದ್ದರಿಂದ ನನಗೆ ಅತೀವ ಸಂತೋಷವಾಗುತ್ತಿದೆ. ಇದನ್ನು ಜೇಮ್ಸ್ ಬಾಂಡ್ ಮಟ್ಟಕ್ಕೆ ತೆಗೆದುಕೊಂಡಿದ್ದಕ್ಕಾಗಿ ಚಿತ್ರದ ನಿರ್ಮಾಪಕ ಬಾರ್ಬರಾ ಬ್ರೊಕೊಲಿ, ನಿರ್ದೇಶಕ ಕ್ಯಾರಿ ಫುಕುನಾಗಾ, ಡೇನಿಯಲ್ ಕ್ರೇಗ್, ಹ್ಯಾನ್ಸ್ ಜಿಮ್ಮರ್ ಸೇರಿ ನಮ್ಮ '007' ಕುಟುಂಬಕ್ಕೆ ನಾನು ಧ್ಯನವಾದ ಹೇಳುತ್ತೇನೆ ಎಂದರು.
ಫಿನ್ನಿಯಾಸ್ ಒ'ಕೋನ್ನೆಲ್ ಮಾತನಾಡಿ, ನಮಗೆ ನಮ್ಮ ಪೋಷಕರೇ ದೊಡ್ಡ ಸ್ಫೂರ್ತಿ, ಅವರೇ ನಮ್ಮ ಪಾಲಿನ ಹೀರೋಗಳು. ಹೀಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆಸ್ಕರ್ ಪ್ರಶಸ್ತಿ ನೀಡಿದ ಅಕಾಡೆಮಿಗೂ ಧನ್ಯವಾದಗಳು ಎಂದು ಹೇಳಿದರು. ಇನ್ನು, ಬಿಲ್ಲಿ ಎಲಿಷ್ 2000ರ ಇಸ್ವಿಯಲ್ಲಿ ಜನಿಸಿದ ಮೊದಲ ವಿಜೇತೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚಿತ್ರ ಭಾರತಿ ಚಲನಚಿತ್ರೋತ್ಸವಕ್ಕೆ ತೆರೆ : 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ, ನಟಿಗೆ ಸನ್ಮಾನ