ಕೆಕ್ಕರಿಸಿ ನೋಡುವ ಕೆಂಗಣ್ಣುಗಳು, ಭಯಾನಕ ನಗು, ಖಡಕ್ ಧ್ವನಿಯಿಂದಲೇ ಬೆಳ್ಳಿ ತೆರೆ ಮೇಲೆ ಅಬ್ಬರಿಸುತ್ತಿದ್ದ ನಟ ಭಯಂಕರ ವಜ್ರಮುನಿ ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಬಹುಬೇಡಿಕೆಯ ಖಳನಟರಾಗಿ ಮೆರೆದಿದ್ರು. ತಮ್ಮ ಮನೋಜ್ಞ ಅಭಿನಯದಿಂದಲೇ ನಟ ಭಯಂಕರ ಎಂಬ ಬಿರುದು ಪಡೆದಿದ್ದ ವಜ್ರಮುನಿ ನಮ್ಮೆಲ್ಲರನ್ನ ಅಗಲಿ 15 ವರ್ಷಗಳು ಕಳೆದಿದ್ದು, ಇಂದು ಅವರ ಪುಣ್ಯ ಸ್ಮರಣೆ.
2006ರ ಜನವರಿ 5ರಂದು ಕಿಡ್ನಿ ವೈಫಲ್ಯದಿಂದ ನಟ ಭೈರವ ವಜ್ರಮುನಿ ಇಹಲೋಕ ತ್ಯಜಿಸಿದರು. ವಜ್ರಮುನಿ ಇಲ್ಲದೇ ಒಂದೂವರೆ ದಶಕ ಕಳೆದರೂ ಅವರನ್ನು ಅಭಿಮಾನಿಗಳು ಮರೆತಿಲ್ಲ. ನೂರಾರು ಸಿನಿಮಾಗಳಲ್ಲಿ ಅವರು ನಿಭಾಯಿಸಿದ ಪಾತ್ರಗಳು ಇಂದಿಗೂ ಜನರನ್ನು ರಂಜಿಸುತ್ತಿವೆ. ಇಂದು ಖಳನಾಯಕನಾಗಬೇಕು ಎಂಬ ಆಸೆ, ಗುರಿ ಇಟ್ಟುಕೊಂಡು ಬರುವ ಎಷ್ಟೋ ಹೊಸ ಕಲಾವಿದರಿಗೆ ವಜ್ರಮುನಿಯವರೇ ರೋಲ್ ಮಾಡಲ್ ಎಂದರೆ ತಪ್ಪಾಗಲಾರದು.
ಇನ್ನು ಕನ್ನಡ ಚಿತ್ರರಂಗದಲ್ಲಿ ಶ್ರೇಷ್ಠ ಖಳನಾಯಕನಾಗಿ ಗುರುತಿಸಿಕೊಂಡಿರುವವರ ಪೈಕಿ ವಜ್ರಮುನಿ ಅಗ್ರಗಣ್ಯರು. 1969ರಿಂದ 1996ರವರೆಗೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ವಜ್ರಮುನಿ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರೋದು ವಿಶೇಷ.
1944 ಮೇ 11ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಹುಟ್ಟಿದವರು ವಜ್ರಮುನಿ. ಇವರ ತಂದೆ ವಜ್ರಪ್ಪ. ಬೆಂಗಳೂರು ಸಿಟಿ ಮುನಿಸಿಪಾಲಿಟಿಯಲ್ಲಿ ಕಾರ್ಪೊರೇಟರ್ ಆಗಿದ್ದರು. ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಜ್ರಮುನಿ, ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಪ್ರಚಂಡ ರಾವಣ ನಾಟಕದಲ್ಲಿ ರಾವಣನ ಪಾತ್ರದಲ್ಲಿ ಅಬ್ಬರಿಸಿದರು. ರಾವಣನಾಗಿ ವಜ್ರಮುನಿ ಘರ್ಜಿಸಿದ್ದನ್ನು ಕಂಡು ಮೆಚ್ಚಿದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮಲ್ಲಮ್ಮನ ಪವಾಡ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದರು.
ತಮ್ಮ ಮೊದಲ ಚಿತ್ರದಲ್ಲೇ ಎಲ್ಲರ ಮನ ಗೆಲ್ಲುವಲ್ಲಿ ವಜ್ರಮುನಿ ಯಶಸ್ವಿಯಾದರು. ಮಲ್ಲಮ್ಮನ ಪವಾಡ ಹಿಟ್ ಆಗುತ್ತಿದ್ದಂತೆಯೇ ಖಳನಟ ವಜ್ರಮುನಿಗೆ ಬೇಡಿಕೆ ಹೆಚ್ಚಾಯ್ತು. ಬಹದ್ದೂರ್ ಗಂಡು, ಮಯೂರ, ಶಂಕರ್ ಗುರು, ಸಂಪತ್ತಿಗೆ ಸವಾಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ವಜ್ರಮುನಿ ಅಬ್ಬರಿಸಿ ಬೊಬ್ಬಿರಿದರು.
ಬೆತ್ತಲೆ ಸೇವೆ ಚಿತ್ರದ ನಟನೆಗೆ ವಜ್ರಮುನಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. 2005ರಲ್ಲಿ ಇವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿತ್ತು. 2006ರಲ್ಲಿ ಕಿಡ್ನಿ ವೈಫಲ್ಯದಿಂದ ವಜ್ರಮುನಿ ನಿಧನರಾದರು.