ಹೈದರಾಬಾದ್: ಪ್ರಸ್ತುತ ಅಂತಾರಾಷ್ಟ್ರೀಯ ಸಿರೀಸ್ 'ಸಿಟಾಡೆಲ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ, ತನ್ನ ರೊಮ್ಯಾಂಟಿಕ್ ಡ್ರಾಮಾ 'ಟೆಕ್ಸ್ಟ್ ಫಾರ್ ಯು' ಮತ್ತು 'ಮ್ಯಾಟ್ರಿಕ್ಸ್ ರೀಬೂಟ್' ಅನ್ನು ಕೋವಿಡ್ ಭೀತಿಯ ನಡುವೆ ಚಿತ್ರೀಕರಿಸಿದ್ದಾರಂತೆ. ಅಷ್ಟೇ ಅಲ್ಲದೆ, ಶೂಟಿಂಗ್ಗೆ ಹೋಗುವಾಗ ಕಣ್ಣೀರು ಹಾಕಿರುವ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮ್ಯಾಗಜೀನ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಿಗ್ಗಿ, "ಕೊರೊನಾ ಆರಂಭದ ದಿನದಲ್ಲಿ ನಾನು ನನ್ನ ಮನೆಯವರ ಜೊತೆ ಸಂತೋಷದಿಂದ ಕಾಲ ಕಳೆದಿದ್ದೇನೆ. ಆದರೆ ಈ ರೋಗಕ್ಕೆ ಕೊನೆಯಿಲ್ಲ ಎಂದು ತಿಳಿದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಶೂಟಿಂಗ್ಗೆ ತೆರಳಿದೆ" ಎಂದು ಹೇಳಿದ್ದಾರೆ.
ಸೆಟ್‌ಗೆ ಹಿಂತಿರುಗುವ ಸಂದರ್ಭದಲ್ಲಿ ಆದ ಅನುಭವವನ್ನು ಪ್ರಿಯಾಂಕ ಹಂಚಿಕೊಂಡಿದ್ದಾರೆ. "ನಾನು ನನ್ನ ಕುಟುಂಬದೊಂದಿಗೆ ಆರು ತಿಂಗಳುಗಳ ಕಾಲ ಮನೆಯಲ್ಲಿ ಸುರಕ್ಷಿತವಾಗಿದ್ದೆ. ಆ ಬಳಿಕ ಮೊದಲ ಬಾರಿಗೆ ಶೂಟಿಂಗ್ ಹಿಂತಿರುಗಬೇಕಾದ ಪರಿಸ್ಥಿತಿ ಬಂತು. ಆ ಸಂದರ್ಭದಲ್ಲಿ ವಿಮಾನದಲ್ಲಿ ಕಣ್ಣೀರು ಹಾಕಿದ್ದೆ. ಏಕೆಂದರೆ ನನಗೆ ತುಂಬಾ ಭಯವಾಗಿತ್ತು" ಎಂದು ಹೇಳಿದ್ದಾರೆ.
"ಆದರೆ ಈ ಎಲ್ಲಾ ಘಟನೆಗಳು ನಡೆದ ಬಳಿಕ ಯುಕೆಯಲ್ಲಿ ನೆಲೆಸಲು ನನಗೆ ನನ್ನ ತಾಯಿ ಮಧು ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಸಹಾಯ ಮಾಡಿದರು. ನನ್ನ ಕುಟುಂಬ ನನ್ನೊಂದಿಗೆ ಬಂದು ನೆಲೆಸಿತು. ಚಿತ್ರೀಕರಣ ನಡೆಯುತ್ತಿದ್ದರೂ ಸಹ ನಾನು ನನ್ನ ಕುಟುಂಬದೊಂದಿಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಿಸಿದೆ. ನಿಕ್ ನನಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದ್ದಾನೆ" ಎಂದರು.
ಕಳೆದ ಎರಡು ದಶಕಗಳಿಂದ ಕೇವಲ ಸಿನಿಮಾದ ಮೇಲೆ ಗಮನ ಹರಿಸಿರುವ ಪಿಗ್ಗಿ, ಇದೀಗ ಕುಟುಂಬದ ಜೊತೆಯೂ ಸಮಯ ಕಳೆಯಲು ಮುಂದಾಗಿದ್ದಾರೆ. "ನಾನು ಕಳೆದ 20 ವರ್ಷಗಳನ್ನು ವೃತ್ತಿಜೀವನ ಎಂಬ ಓಟದ ಕುದುರೆಯ ಮೇಲೆ ಕಳೆದಿದ್ದೇನೆ. ಈಗ ಕುಟುಂಬಕ್ಕೂ ಪ್ರಾಮುಖ್ಯತೆ ನೀಡುತ್ತೇನೆ" ಎಂದು ಹೇಳಿದ್ದಾರೆ.