ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಾಂದ್ರಾ ಪೊಲೀಸರು ನಟಿ ಹಾಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಜೂನ್ 14 ರಂದು ಸುಶಾಂತ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಪೋಸ್ಟ್ ಮಾರ್ಟಂ ವರದಿಯಲ್ಲೂ ಇದು ಆತ್ಮಹತ್ಯೆ ಎಂದು ಖಚಿತಪಡಿಸಲಾಗಿತ್ತು. ಆದರೆ ಸುಶಾಂತ್ ರೂಮ್ನಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿರಲಿಲ್ಲ. ಸುಶಾಂತ್ ಆತ್ಮಹತ್ಯೆಯ ಹಿಂದಿನ ಕಾರಣವನ್ನು ತಿಳಿಯುವ ಉದ್ದೇಶದಿಂದ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಜನರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಬಾಂದ್ರಾ ಮನೆಯಲ್ಲಿ ಸುಶಾಂತ್ ಹಾಗೂ ರಿಯಾ ಚಕ್ರವರ್ತಿ ಬಹಳ ದಿನಗಳಿಂದ ಒಟ್ಟಿಗೆ ನೆಲೆಸಿದ್ದು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ನಾಲ್ಕು ದಿನಗಳ ಮುನ್ನ ರಿಯಾ ಬಾಂದ್ರಾ ಮನೆಯಿಂದ ಹೊರನಡೆದಿದ್ದರು. ಆದ್ದರಿಂದ ಪೊಲೀಸರು ರಿಯಾ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸುಶಾಂತ್ ಹಾಗೂ ರಿಯಾ ನಡುವೆ ನಡೆದ ಚಾಟಿಂಗ್ ಸಂಭಾಷಣೆಯನ್ನು ತೋರಿಸುವಂತೆ ಪೊಲೀಸರು ಕೇಳಿದ್ದು ವಿಡಿಯೋ, ಫೋಟೋ ಸೇರಿದಂತೆ ರಿಯಾ ಅವರ ಮೊಬೈಲನ್ನು ಸಂರ್ಪೂರ್ಣ ಸ್ಕ್ಯಾನ್ ಮಾಡಲಾಗಿದೆ.
ಇನ್ನು ಸುಶಾಂತ್ ಜೊತೆಗಿನ ಅವರ ಸಂಬಂಧದ ಬಗ್ಗೆ ಕೇಳಿದಾಗ 2020 ರಲ್ಲಿ ಇಬ್ಬರೂ ಮದುವೆಯಾಗಲು ಪ್ಲ್ಯಾನ್ ಮಾಡಿದ್ದೆವು ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಆಸ್ತಿಯನ್ನು ಖರೀದಿಸಲು ಕೂಡಾ ಇಬ್ಬರೂ ಚರ್ಚಿಸಿದ್ದೆವು ಎಂದು ಹೇಳಿದ್ದಾರೆ. ಬ್ರೇಕ್ಅಪ್ ಬಗ್ಗೆ ಕೇಳಿದಾಗ ಇಬ್ಬರ ನಡುವೆ ಕೆಲವೊಂದು ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದರಿಂದ ನಾನು ಬಾಂದ್ರಾ ಮನೆಯಿಂದ ಹೊರ ಹೋದೆ. ನಂತರ ಇಬ್ಬರೂ ಫೋನ್ ಕಾಲ್ನಲ್ಲಿ ಮಾತನಾಡಿದ್ದೆವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಪ್ತ ಗೆಳೆಯ ಮಹೇಶ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಆದರೆ ಮಹೇಶ್ ಫೋನ್ ರಿಸೀವ್ ಮಾಡಿದ ಕಾರಣ ರಿಯಾಗೆ ಕರೆ ಮಾಡಿದ್ದಾರೆ. ಆದರೆ ರಿಯಾ ಕೂಡಾ ಕರೆ ಸ್ವೀಕರಿಸಿಲ್ಲ. ಸುಶಾಂತ್ ಮಿಸ್ಡ್ ಕಾಲ್ ನೋಡಿದೊಡನೆ ಮಹೇಶ್ ಕರೆ ಮಾಡಿದರೂ ಕಾಲ್ ಕನೆಕ್ಟ್ ಆಗಲಿಲ್ಲ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಸುಶಾಂತ್ ನಡವಳಿಕೆಯಲ್ಲಿ ಬದಲಾವಣೆ ಬಗ್ಗೆ ಕೇಳಿದಾಗ ಬಹಳ ದಿನಗಳಿಂದ ಸುಶಾಂತ್ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೆಲವು ದಿನಗಳಿಂದ ಮೆಡಿಸನ್ಗಳನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿದ್ದರು ಎಂಬ ವಿಚಾರವನ್ನು ರಿಯಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಪೊಲೀಸರ ಪ್ರಕಾರ, ಸುಶಾಂತ್ ಹಾಗೂ ರಿಯಾ ಚಕ್ರವರ್ತಿ ಸಿನಿಮಾವೊಂದರಲ್ಲಿ ಜೊತೆಗೆ ನಟಿಸಬೇಕಿತ್ತು. ಆದರೆ ಒಂದು ವರ್ಷ ಸುಶಾಂತ್ ಇತರ ಸಿನಿಮಾಗಳಲ್ಲಿ ಬ್ಯುಸಿ ಇದ್ದರು. ಯಾವ ಸಿನಿಮಾಗಳನ್ನು ಸುಶಾಂತ್ ಒಪ್ಪಿಕೊಂಡಿದ್ದರು ಎಂಬ ಮಾಹಿತಿಯನ್ನು ಕೂಡಾ ರಿಯಾ ಪೊಲೀಸರಿಗೆ ನೀಡಿದ್ದಾರೆ. ಇದರೊಂದಿಗೆ ಪೊಲೀಸರು ಕೆಲವೊಂದು ಪ್ರೊಡಕ್ಷನ್ ಹೌಸ್ಗಳಿಗೆ ಕೂಡಾ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.