ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಕಳೆದ ವರ್ಷವೇ ಒಂದು ಮಾತನ್ನು ಸ್ಪಷ್ಟಪಡಿಸಿದ್ದರು. ಅದು, ‘ಎಲ್ಲಕ್ಕಿಂತ ದೊಡ್ಡದು ಜೀವ. ಜೀವ ಇದ್ದರೆ ಜೀವನ ಮಾಡಿಕೊಳ್ಳಬಹುದು. ಹಾಗಾಗಿ, ಮೊದಲು ಜೀವ ಉಳಿಸಿಕೊಳ್ಳುವುದು ಮೊದಲ ಆದ್ಯತೆ ಆಗಿರುವುದರಿಂದ, ಯಾವುದೇ ಕಾರಣಕ್ಕೂ ತಮ್ಮ ಮಗಳನ್ನು ಚಿತ್ರೀಕರಣಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಕೊರೊನಾ ಕಡಿಮೆಯಾಗಿ, ಲಾಕ್ಡೌನ್ ಮುಗಿದ ಮೇಲೆ ಮುಂದೆ ನೋಡೋಣ ಎಂದು ಹೇಳಿದ್ದರು.
![Shraddha Kapoor to act with Karthik Aryan in Satyanarayan Ki Katha](https://etvbharatimages.akamaized.net/etvbharat/prod-images/12276566_vvv.jpg)
ಅಪ್ಪನ ಮಾತಿಗೆ ಕಟ್ಟುಬಿದ್ದಿದ್ದ ನಟಿ ಶ್ರದ್ಧಾ ಕಪೂರ್ ಸಹ ಕಳೆದ ಒಂದೂವರೆ ವರ್ಷಗಳಿಂದ ಚಿತ್ರೀಕರಣಕ್ಕೆ ಹೋಗಿರಲಿಲ್ಲ ಮತ್ತು ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ಕೋವಿಡ್ ಹಾವಳಿ ಕೊಂಚ ಕಡಿಮೆಯಾಗುತ್ತಿರುವುದರಿಂದ, ಶಕ್ತಿ ಕಪೂರ್ ತಮ್ಮ ಮಗಳಿಗೆ ಚಿತ್ರೀಕರಣಕ್ಕೆ ಹೋಗುವುದಕ್ಕೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಶ್ರದ್ಧಾ ಸಹ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಶ್ರದ್ಧಾ ಒಪ್ಪಿರುವ ಹೊಸ ಚಿತ್ರದ ಹೆಸರು ‘ಸತ್ಯನಾರಾಯಣ್ ಕಿ ಕಥಾ’. ಹೆಸರು ಕೇಳಿದರೆ, ಇದೇನು ಪೌರಾಣಿಕ ಕಥೆಯಾ ಎಂಬ ಪ್ರಶ್ನೆ ಬರಬಹುದು. ಸತ್ಯನಾರಾಯಣ್ ಎಂಬ ಯುವಕನ ಸುತ್ತ ಈ ಚಿತ್ರ ಸುತ್ತಲಿದೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ಸಾಜಿದ್ ನಾದಿಯಾದ್ವಾಲಾ ನಿರ್ಮಾಣ ಮಾಡಲಿದ್ದಾರೆ.
![Shraddha Kapoor to act with Karthik Aryan in Satyanarayan Ki Katha](https://etvbharatimages.akamaized.net/etvbharat/prod-images/12276566_vdasdvv.jpg)
ಇದಕ್ಕೂ ಮುನ್ನ, ಶ್ರದ್ಧಾ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ಅವರನ್ನು ಒಂದೇ ಚಿತ್ರದಲ್ಲಿ ತರಬೇಕು ಎಂದು ಕೆಲವು ಪ್ರಯತ್ನಗಳಾಗಿದ್ದವು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ನಿರ್ಮಾಪಕ ಸಾಜಿದ್ ನಾದಿಯಾದ್ವಾಲಾ ಅದನ್ನು ಸಾಧ್ಯವಾಗಿಸಿದ್ದಾರೆ. ಈಗಾಗಲೇ, ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಸಮೀರ್ ವಿದ್ವಾನ್ ನಿರ್ದೇಶನ ಮಾಡಲಿರುವ ಈ ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಮುಂಬೈನಲ್ಲಿ ಆರಂಭಗೊಳ್ಳಲಿದೆ.